Home Local ಯುವ ಸಬಲೀಕರಣ ಸಂವಾದ ಗೋಷ್ಠಿ

ಯುವ ಸಬಲೀಕರಣ ಸಂವಾದ ಗೋಷ್ಠಿ

SHARE

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಹಶೀಲ್ದಾರ ಮತ್ತು ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಕಾರವಾರದ ಆಶ್ರಯದಲ್ಲಿ ಯುವ ಸ್ಪಂದನ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಒಂದು ಸಮಗ್ರ ಭಾವನಾತ್ಮಕ ಬೆಂಬಲ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯುವ ಪರಿವರ್ತಕರಾದ ಶಶಿಕಲಾ ನಾಯ್ಕ ಮಾತನಾಡಿ ಯುವಕರಿಗಾಗಿ ಸುರಕ್ಷಿತ ಕುಟುಂಬ ಮತ್ತು ಸಮಾಜ ನಿರ್ಮಾಣ ನಿರ್ಮಿಸುವುದೇ ಯುವ ಸ್ಪಂದನ ಕೇಂದ್ರದ ಉದ್ದೇಶವಾಗಿದೆ ಎಂದರು.

ಮತ್ತೊಬ್ಬ ಯುವ ಪರಿವರ್ತಕ ಗೋಪಾಲಕೃಷ್ಣ ನಾಯ್ಕ ಹದಿಹರಯದವರನ್ನು ಕಾಡುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ವಿಶ್ಲೇಷಿಸಿದರು. ಅದಕ್ಕೆ ಪರಿಹಾರೋಪಾಯಗಳನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಮನೋಸಾಮಾಜಿಕ ಸವಾಲುಗಳನ್ನು ಎದುರಿಸಲು ಪಠ್ಯಪೂರಕ ಹಾಗೂ ಪಠ್ಯೇತರ ವಿಷಯಗಳ ಅರಿವು ಇದ್ದಷ್ಟೂ ಕಡಿಮೆಯೆ ಅಲ್ಲದೇ ಈ ಬಗ್ಗೆ ವಿಸ್ತøತ ಬೋಧನೆ ಬಾಹ್ಯ ಮಾರ್ಗದರ್ಶಕರಿಂದ ಪಡೆಯುವುದು ಅತ್ಯಾವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಯುವ ಸ್ಪಂದನ ಎಂಬ ಮಾರ್ಗದರ್ಶಿ ಹೊತ್ತಿಗೆಯನ್ನು ಮುಖ್ಯಾಧ್ಯಾಪಕರಿಗೆ ಯುವ ಪರಿವರ್ತಕರಾದ ಶಶಿಕಲಾ ನಾಯ್ಕ ನೀಡಿದರು. 280 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು. ಪ್ರಾರಂಭದಲ್ಲಿ ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿದರು. ಶಿಕ್ಷಕ ವಿಷ್ಣು ಭಟ್ಟ ವಂದಿಸಿದರು.