Home Important ಕಾಯ್ದೆ ಬಗ್ಗೆ ವೈದ್ಯರಲ್ಲಿದ್ದ ಆತಂಕ, ಭಯ ನಿವಾರಿಸಲಾಗಿದೆ : ಸಿದ್ದರಾಮಯ್ಯ

ಕಾಯ್ದೆ ಬಗ್ಗೆ ವೈದ್ಯರಲ್ಲಿದ್ದ ಆತಂಕ, ಭಯ ನಿವಾರಿಸಲಾಗಿದೆ : ಸಿದ್ದರಾಮಯ್ಯ

SHARE

ಬೆಂಗಳೂರು: ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ತಿದ್ದುಪಡಿ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಮಾರ್ಪಾಡು ಮಾಡಿ ಮಂಡಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಎಂಇ ವಿರೋಧಿಸಿ ಮುಷ್ಕರ ನಡೆಸುತ್ತಿದ್ದ ಭಾರತೀಯ ವೈದ್ಯಕೀಯ ಸಂಘದ ಮುಖಂಡರ ಜತೆ ಸಿಎಂ ಸಿದ್ದರಾಮಯ್ಯ ಅವರು ಸುವರ್ಣ ವಿಧಾನಸೌದದಲ್ಲಿ ಶುಕ್ರವಾರ ಸಭೆ ನಡೆಸಿದ್ದು, ಸಭೆಯಲ್ಲಿ ಬಳಿಕ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

‘ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಖಾಸಗಿ ವೈದ್ಯರೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದೆ. ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ವೈದ್ಯರ ಮುಖಂಡರೊಂದಿಗೆ ಮಾತುಕತೆ ನಡೆಸಿ, ಕಾಯ್ದೆ ಕುರಿತಂತೆ ಅವರಲ್ಲಿದ್ದ ಆತಂಕ ಮತ್ತು ಭಯವನ್ನು ನಿವಾರಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

‘ರಾಜ್ಯದ ಎಲ್ಲ ಜನರಿಗೆ ಕೈಗೆಟಕುವ ದರಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಯಾರಿಗೂ ತೊಂದರೆಯಾಗದಂತೆ, ರಾಜ್ಯದ ಜನರ ಹಿತಾಸಕ್ತಿಗೂ ಧಕ್ಕೆಯಾಗದಂತೆ ಮಸೂದೆಯನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಸಿಎಂ ಹೇಳಿದ್ದಾರೆ.