Home Local ವೈವಿದ್ಯತೆಯ ಸಂಗಮದ ಕರಾವಳಿ ಉತ್ಸವಕ್ಕೆ ನಡೆದಿದೆ ಭಾರೀ ಸಿದ್ಧತೆ.

ವೈವಿದ್ಯತೆಯ ಸಂಗಮದ ಕರಾವಳಿ ಉತ್ಸವಕ್ಕೆ ನಡೆದಿದೆ ಭಾರೀ ಸಿದ್ಧತೆ.

SHARE

ಕಾರವಾರ: ಡಿಸೆಂಬರ್ 8 ರಿಂದ 10ರವರೆಗೆ ಕಾರವಾರ ನಗರದಲ್ಲಿ ನಡೆ ಯಲಿರುವ ಕರಾವಳಿ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಜಿಲ್ಲಾಧಿಕಾರಿ ಎಸ್.ಎಸ್‌.ನಕುಲ್‌ ನೇತೃತ್ವ ದಲ್ಲಿ ಪೂರ್ವ ಸಿದ್ಧತಾ ಸಭೆ ಕೂಡ ನಡೆದಿದೆ.

ಈ ಬಾರಿ ಕರಾವಳಿ ಉತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನಲ್ಲದೇ ಇನ್ನಿತರ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಖ್ಯಾತ ಬಾಲಿವುಡ್‌ ಗಾಯಕ ಕೈಲಾಶ್‌ ಖೇರ್‌ ಹಾಗೂ ಶಾಲ್ಮಲಿ ಕೋಲ್ಗಡೆ ಅವರನ್ನು ಕರೆಸುವ ಬಗ್ಗೆ ಚರ್ಚಿಸಲಾಗಿದೆ. ಅವರ ದಿನಾಂಕ ಹೊಂದಾಣಿಕೆ ಆಗದಿದ್ದರೆ ಬೇರೆಯವರನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ.

ಮ್ಯಾರಥಾನ್‌, ವಿವಿಧ ಸ್ಪರ್ಧೆ: ಕಳೆದ ಬಾರಿಯಂತೆ ಈ ವರ್ಷ ಕೂಡ ಆದಿತ್ಯಾ ಬಿರ್ಲಾ ಕಂಪೆನಿ ಸಹಯೋಗದಲ್ಲಿ ವ್ಯವಸ್ಥಿತವಾಗಿ ಮ್ಯಾರಥಾನ್‌ ಆಯೋಜಿಸಲಾಗಿದೆ. ಬೀಚ್ ವಾಲಿಬಾಲ್, ಹಗ್ಗ ಜಗ್ಗಾಟ ಕುಸ್ತಿ, ದೇಹದಾರ್ಢ್ಯ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನೂ ಆಯೋಜಿಸಲಾಗುತ್ತಿದೆ.

ಉತ್ಸವ ಸಂದರ್ಭದಲ್ಲಿ ಚಿತ್ರಕಲೆ, ಶಿಲ್ಪಕಲೆ ಕಾರ್ಯಾಗಾರ, ಮರಳು ಶಿಲ್ಪ ಪ್ರದರ್ಶನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ರಂಗೋಲಿ, ಅಡುಗೆ ಸ್ಪರ್ಧೆ ಸೇರಿದಂತೆ ಇನ್ನಿತರೆ ಸ್ಪರ್ಧೆಗಳನ್ನು ತಾಲ್ಲೂಕು ಮಟ್ಟದಲ್ಲಿ ನಡೆಸಿ ನಂತರ ಜಿಲ್ಲಾಮಟ್ಟದ ಸ್ಪರ್ಧೆ ಯನ್ನು ಉತ್ಸವ ಸಂದರ್ಭದಲ್ಲಿ ನಡೆಸಲಾಗುತ್ತಿದೆ. ಮಾಲಾದೇವಿ ಕ್ರೀಡಾಂಗಣದಲ್ಲಿ ಕಳೆದ ಬಾರಿಯಂತೆ ಶ್ವಾನ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗುತ್ತಿದೆ.

ಫಲಪುಷ್ಪ ಪ್ರದರ್ಶನ: ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಕೇವಲ ಹೂವುಗಳನ್ನು ತಂದು ಪ್ರದರ್ಶಿಸದೇ ವಿವಿಧ ರೀತಿಯ ಆಕರ್ಷಕ ಹೂವುಗಳನ್ನು ಬೆಳೆಸಲು ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯ ಖಾಸಗಿ ನರ್ಸರಿಗಳ ಸಹಯೊಗದೊಂದಿಗೆ ಪ್ರದರ್ಶನ ಮತ್ತು ಮಾರಾಟ ಆಯೋಜಿ ಸಬೇಕು. ವಿಶೇಷ ಮತ್ತು ಅಪರೂಪದ ಹಣ್ಣುಗಳನ್ನು ಮತ್ತು ಬೊನ್ಸಾಯ್‌ಗಳನ್ನು ಪ್ರದರ್ಶನಕ್ಕೆ ಇಡುವುದರೊಂದಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಕಲಾವಿದರಿಗೆ ವಸತಿ ವ್ಯವಸ್ಥೆ: ‘ಉತ್ಸವಕ್ಕಾಗಿ ಬರುವ ಕಲಾವಿದರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸ ಲಾಗುವುದು. ಮೂರು ದಿನಗಳ ವರೆಗೆ ನಡೆಯುವ ಉತ್ಸವದಲ್ಲಿ ನೈರ್ಮಲ್ಯ ಮತ್ತು ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಪ್ರಮುಖ ಬೀದಿಗಳಿಗೆ ಜಿಲ್ಲೆಗೆ ಸಂಬಂಧಪಟ್ಟಂತಹ ಕಲಾಕೃತಿಗಳ ದೀಪಾಲಂಕಾರ ವ್ಯವಸ್ಥೆ ಮಾಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದ್ದಾರೆ.

ಸ್ಕೂಬಾ ಡೈವಿಂಗ್‌ ತರಬೇತಿ
ಕರಾವಳಿ ಉತ್ಸವ ಸಮಿತಿ ವತಿಯಿಂದ ಆಯ್ದ 20 ಯುವಕ/ಯುವತಿಯರಿಗೆ ಸ್ಕೂಬಾ ಡೈವಿಂಗ್‌ ತರಬೇತಿ ಆಯೋಜಿಸಲಾಗಿದೆ. ಮುರ್ಡೇಶ್ವರದ ನೇತ್ರಾಣಿ ಹಾಗೂ ಕಾರವಾರದ ದೇವಗಡದಲ್ಲಿ ಸ್ಕೂಬಾ ಡೈವಿಂಗ್‌ ಆಯೋಜಿಸಲಾಗುತ್ತಿದೆ. ಡಿಸೆಂಬರ್‌ ತಿಂಗಳಾಂತ್ಯಕ್ಕೆ ಈ ತರಬೇತಿ ನಡೆಯಲಿದೆ.

ಡಿಪ್ಲೊಮಾ ಅಥವಾ ಪಿಯುಸಿ (ವಿಜ್ಞಾನ) ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನವರು ನ.23ರೊಳಗೆ ಜಿಲ್ಲಾಧಿಕಾರಿ ಕಚೇರಿಯಿಂದ ನಮೂನೆ ಪಡೆದು ಅರ್ಜಿ ಸಲ್ಲಿಸಬಹುದು. ನ.24ರಂದು ನಗರಸಭೆ ಈಜು ಕೊಳದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.