Home Important ಚಿನ್ನ-ಬೆಳ್ಳಿ ವರ್ತಕನಿಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಕರೆ!

ಚಿನ್ನ-ಬೆಳ್ಳಿ ವರ್ತಕನಿಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಕರೆ!

SHARE

ಶಿವಮೊಗ್ಗ: ವಿದೇಶದಲ್ಲಿ ಅಡಗಿಕೊಂಡು ಪ್ರತಿಷ್ಠಿತರಿಗೆ ಹಣ ನೀಡುವಂತೆ ಬೆದರಿಕೆ ಹಾಕುವ ಭೂಗತ ಪಾತಕಿ ರವಿ ಪೂಜಾರಿ ತೀರ್ಥಹಳ್ಳಿಯ ಪ್ರತಿಷ್ಠಿತ ಚಿನ್ನ – ಬೆಳ್ಳಿ ವರ್ತಕರೊಬ್ಬರ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ 25 ಕೋಟಿ ರೂ. ನೀಡುವಂತೆ ಡಿಮ್ಯಾಂಡ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ರವಿ ಪೂಜಾರಿಯು ಚಿನ್ನ – ಬೆಳ್ಳಿ ವರ್ತಕನ ಕುಟುಂಬಕ್ಕೆ ನಿರಂತರವಾಗಿ ದೂರವಾಣಿ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಹಣ ನೀಡದಿದ್ದರೆ ಜೀವ ತೆಗೆಯುವ ಬೆದರಿಕೆಯೂ ಹಾಕಿದ್ದಾನೆ ಎಂದು ಹೇಳಲಾಗಿದೆ. ಈ ಕರೆಯಿಂದ ಆತಂಕಗೊಂಡ ವರ್ತಕ ಕುಟುಂಬವು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದೆಯಾದರೂ ದೂರು ನೀಡಲು ಹಿಂದೇಟು ಹಾಕಿದೆ. ತದನಂತರ ವರ್ತಕ ಕುಟುಂಬವು ಪೊಲೀಸರಿಗೆ ದೂರು ನೀಡಿದೆ ಎಂದು ಹೇಳಲಾಗುತ್ತಿದೆ.

ಭೂಗತ ಪಾತಕಿಯ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ವರ್ತಕ ಕುಟುಂಬಕ್ಕೆ ಸಶಸ್ತ್ರ ಪೊಲೀಸ್ ಭದ್ರತೆ ಒದಗಿಸಿದೆ. ಪಾತಕಿಯ ಪರವಾಗಿ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಸಹಚರರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಪ್ರಾರಂಭಿಸಿದೆ. ಜೊತೆಗೆ ಪಾತಕಿ ಮಾಡಿದ ದೂರವಾಣಿ ಕರೆಗಳ ಪರಿಶೀಲನೆಯನ್ನು ಕೂಡ ಪೊಲೀಸರು ನಡೆಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಇಂಟರ್ನೆಟ್ ಮೂಲಕ ರವಿ ಪೂಜಾರಿ ದೂರವಾಣಿ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ನಡುವೆ ಪ್ರಕರಣವನ್ನು ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದ್ದು, ವಿಶೇಷ ಪೊಲೀಸ್ ತಂಡ ರಚನೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.