Home Article ಬೆಟ್ಟ ಹತ್ತಿದಂತೆ ಗುರಿ ಸಾಧಿಸಿದರೆ?

ಬೆಟ್ಟ ಹತ್ತಿದಂತೆ ಗುರಿ ಸಾಧಿಸಿದರೆ?

SHARE

ಸಾಮಾನ್ಯವಾಗಿ ಎಲ್ಲಾ ಬೆಟ್ಟಗಳ ಮೇಲುಗಡೆ ದೇವಸ್ಥಾನಗಳಿದ್ದು, ದೇವರ ದರ್ಶನ ಪಡೆಯಲೆಂದೇ ಬೆಟ್ಟವನ್ನು ಹತ್ತುತ್ತಾರೆ. ಕೆಲವು ಬೆಟ್ಟಗಳು ಚಾರಣ ಪ್ರಿಯರ ತಾಣವಾಗಿರುತ್ತದೆ. ಈ ಬೆಟ್ಟಗಳನ್ನು ಹತ್ತುವುದು ಸಾಹಸಮಯ ಕಾರ್ಯವಾಗಿರುತ್ತದೆ. ಬೆಟ್ಟಗಳನ್ನು ಹತ್ತುವುದರಿಂದ ಒಂದು ರೀತಿಯ ಖುಷಿಯ ಅನುಭವ ನೀಡುತ್ತದೆ. ಬೆಟ್ಟವನ್ನು ಹತ್ತಿ ಸುತ್ತಲೂ ನೋಡಿದರೆ, ನಮ್ಮ ಕಣ್ಣು ದೃಷ್ಠಿ ಎಷ್ಟು ದೂರ ಹಾಯಿಸುವುದೋ ಅಲ್ಲಿಯವರೆವಿಗೂ ಸುತ್ತ ಮುತ್ತಲ ಗಿಡ, ಮರಗಳಿಂದ ಕೂಡಿದ ಸುಂದರ ಪೃಕೃತಿ ಸೌಂದರ್ಯವು ಕಾಣುತ್ತದೆ. ಇದನ್ನು ನೋಡಿ ಆನಂದಿಸದವರೇ ಕಡಿಮೆ.

ಬೆಟ್ಟ ಹತ್ತಿ ನೋಡು ಎಂದರೆ, ಇದರ ಒಳಾರ್ಥ ಗುರಿಯನ್ನು ತಲುಪಿ ನಂತರ ನೋಡು ಎಂದು ಅರ್ಥೈಸಬಹುದು. ಮನುಷ್ಯನು ತಾನು ಅಂದುಕೊಂಡಿದ್ದ ಗುರಿಯನ್ನು ತಲುಪಿದ ನಂತರ ನೋಡಿದರೆ ಜೀವನವೇ ಒಂದು ಸುಂದರವಾಗಿರುವಂತೆ ಕಾಣುತ್ತದೆ. ಅದೇರೀತಿ ಜ್ಞಾನವನ್ನು ಪಡೆದರೆ ಲೋಕವನ್ನೇ ಕಾಣಬಹುದು. ಯಾರ ಸಹಾಯವಿಲ್ಲದೆ ಪ್ರಪಂಚದ ಆಗು ಹೋಗುಗಳನ್ನು ತಿಳಿಯಬಹುದು. ಬೆಟ್ಟವನ್ನು ಹತ್ತಿ ಪ್ರಕೃತಿ ಸೌಂದರ್ಯ ನೋಡುವಂತೆ ವಿದ್ಯೆಯನ್ನು ಕಲಿತು, ದೇಶದ ಜನರ ಕಷ್ಟವನ್ನು ಅರಿಯಬೇಕು. ಬೆಟ್ಟ ಹತ್ತಲು ಆಗುವುದಿಲ್ಲ ಎಂದು ಬೆಟ್ಟ ಹತ್ತದಿದ್ದರೆ ಆ ಸೌಂದರ್ಯವನ್ನು ಸವಿಯಲು ಆಗುವುದೇ ಇಲ್ಲ ಅದೇ ರೀತಿ ಕಷ್ಟ ಪಡದೆ ಸೋಮಾರಿಯಾಗಿ ವಿದ್ಯೆಯನ್ನು ಕಲಿಯದಿದ್ದರೆ ನಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಂಡಂತೆ ಆಗುತ್ತದೆ. ವಿದ್ಯೆಯೇ ಬಾಳಿನ ಬೆಳಕು. ಜ್ಞಾನಾರ್ಜನೆಯೇ ಮನುಷ್ಯನ ಗುರಿಯಾಗಬೇಕು. ಹಿಮಾಲಯ ಪರ್ವತದಂತೆ ವಿದ್ಯೆ ಕಲಿತರೆ ಹಿಮಾಲಯ ಪರ್ವತದಂತೆ ಎತ್ತರಕ್ಕೆ ಬೆಳೆಯಬಹುದು. ಸಣ್ಣ ಪುಟ್ಟ ಗುಡ್ಡ ಹತ್ತುವಂತೆ ವಿದ್ಯೆ ಕಲಿತರೆ ಅದಕ್ಕೆ ತಕ್ಕಂತೆ ಇರಬಹುದು.

ಮನುಷ್ಯನು ಸಣ್ಣ ಪುಟ್ಟ ಗುಡ್ಡ ಹತ್ತಿದವರಂತೆ ಅಲ್ಪವಿದ್ಯೆಯನ್ನು ಕಲಿತು ನಾನೇ ಸರ್ವಜ್ಞ ಎಂಬ ರೀತಿಯಲ್ಲಿ ವರ್ತಿಸಿದರೆ ಅಲ್ಪ ವಿದ್ಯೆ ಮಹಾಗರ್ವಿ ಎಂಬಂತೆ ಆಗುತ್ತದೆ.
ಹೆಲಿಕಾಪ್ಟರ್‍ನಲ್ಲಿ ಬಂದು ಸೀದಾ ಬೆಟ್ಟ ಹತ್ತಿದ್ದೇನೆ ಎಂದರೆ ಪ್ರಯೋಜನವಿಲ್ಲ ಅಥವಾ ರಸ್ತೆ ಮೂಲಕ ವಾಹನಗಳಿಂದ ಬೆಟ್ಟವನ್ನು ಹತ್ತಿದರೆ ಬೆಟ್ಟ ಹತ್ತುವ ಖುಷಿಯ ಅನುಭವ ಸಿಗುವುದಿಲ್ಲ. ಬೆಟ್ಟ ಹತ್ತಿದ ಅನುಭವ ಬೇಕು, ಎಷ್ಟು ಶ್ರಮ ವಹಿಸಿರುತ್ತೇವೆಂಬುದು ಮುಖ್ಯ. ಅನುಭವವಿಲ್ಲದೆ ವಿದ್ಯೆ ಕಲಿತರೆ ಏನೂ ಪ್ರಯೋಜನವಿಲ್ಲ. ಕಷ್ಟ ಪಡದೆ ಯಾರದೋ ಸಹಾಯದಿಂದ ಅಥವಾ ಹಣವನ್ನು ಹೇರಳವಾಗಿ ಖರ್ಚುಮಾಡಿ ಪ್ರಮಾಣ ಪತ್ರ ಪಡೆದರೆ ಏನೂ ಪ್ರಯೋಜನವಿಲ್ಲ. ವಿದ್ಯೆಯ ಜೊತೆಗೆ ಜ್ಞಾನವನ್ನೂ ವೃದ್ದಿಸಿಕೊಳ್ಳಬೇಕು. ಕಷ್ಟ ಪಟ್ಟರೆ ಒಳ್ಳೆ ವಿದ್ಯೆ ಕಲಿತು ಪ್ರಪಂಚದ ಜ್ಞಾನ ತಿಳಿಯಬಹುದು, ಎಲ್ಲರ ಕಷ್ಟ ಸುಖಗಳನ್ನು ಅರಿಯಬಹುದು. ಇಲ್ಲದಿದ್ದ ಪಕ್ಷದಲ್ಲಿ ಬೆಟ್ಟ ಹತ್ತಲು ಸೋಮಾರಿಯಾಗಿ ಬೆಟ್ಟದ ತಪ್ಪಲಿನಲ್ಲೇ ಕುಳಿತು ನನಗೆ ಬೆಟ್ಟ ಹತ್ತಲು ಆಗುವುದಿಲ್ಲ, ನನಗೆ ಬೆಟ್ಟ ಹತ್ತಲು ಇಷ್ಟವಿಲ್ಲ ಎಂದು ಹೇಳಿದರೆ, ಬಾವಿಯೊಳಗಿನ ಕಪ್ಪೆಯಂತೆ ಇಷ್ಟೇ ಪ್ರಪಂಚ ಎಂದು ಕುಳಿತಿರಬೇಕಾಗುತ್ತದೆ. ಬೆಟ್ಟವನ್ನು ಹತ್ತಬೇಕಾದರೆ ಮೆಟ್ಟಿಲುಗಳನ್ನು ಬಳಸಿ ಅಥವಾ ಒಂದೊಂದು ಕಡೆ ಹುಷಾರಾಗಿ ಕಂಬಿಗಳನ್ನು ಹಿಡಿದುಕೊಂಡು ಹತ್ತಬೇಕಾಗಿರುತ್ತದೆ. ಅದು ಸ್ವಲ್ಪ ಜಾರಿದರೂ ಅಪಾಯ ತಪ್ಪಿದ್ದಲ್ಲ. ಅದೇ ರೀತಿ ಜೀವನದ ಗುರಿಯನ್ನು ಸಾಧಿಸಲು ಸರಿಯಾದ ಮಾರ್ಗದರ್ಶನ ನೀಡುವ ಗುರುಗಳಿಂದ ಗುರಿಯನ್ನು ಸಾಧಿಸಬಹುದು. ಸರಿಯಾದ ಮಾರ್ಗದರ್ಶಕರು ಇಲ್ಲದಿದ್ದರೆ ಜೀವನದ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಹಾಗೂ ಪೂರ್ಣ ವಿದ್ಯೆ ಕಲಿಯಲು ಆಗುವುದಿಲ್ಲ.

ಕೆಲವರು ಬೆಟ್ಟ ಹತ್ತಿ ದೇವರ ದರ್ಶನ ಪಡೆಯುವವರೆಗೂ ಏನೂ ಸೇವಿಸುವುದಿಲ್ಲ, ಹಾಗೂ ವಿರಮಿಸುವುದಿಲ್ಲ. ಎಷ್ಟೇ ಹಸಿವು ಬಾಯಾರಿಕೆ ಯಾದರೂ ದೇವರ ದರ್ಶನ ಪಡೆದ ನಂತರವೇ ಆಹಾರ ಸೇವಿಸುತ್ತಾರೆ ಹಾಗೂ ವಿರಮಿಸುತ್ತಾರೆ. ಅದೇ ರೀತಿ ಎಷ್ಟೇ ಕಷ್ಟವಾದರೂ ಪೂರ್ಣ ಗುರಿ ಹೊಂದುವವರೆಗೂ ವಿರಮಿಸುವುದಿಲ್ಲ ಎಂಬ ಛಲದೊಂದಿಗೆ ಮುನ್ನುಗ್ಗಿದರೆ ಗುರಿಯನ್ನು ತಲುಪಬಹುದು. ಅರ್ದದಲ್ಲೇ ಬೇಸರಗೊಂಡು ನನಗೆ ಇಷ್ಟೇ ಸಾಕಪ್ಪ ಇನ್ನು ಮುಂದೆ ಸಾಗಲಾರೆ ಎಂದು ಓದುತ್ತಿರುವುದನ್ನು ಅರ್ಧಕ್ಕೇ ಬಿಟ್ಟು ಸಿಕ್ಕ ಕೆಲಸವನ್ನು ಮಾಡಿ ಜೀವನ ಕಳೆಯುವುದು ಅಷ್ಟು ಸೂಕ್ತವಲ್ಲ. ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದು ಪೂರ್ತಿ ಬೆಟ್ಟವನ್ನು ಹತ್ತುವುದಕ್ಕೆ ಆಗದೆ ಇರಬಹುದು. ಅದೇ ರೀತಿ ಜೀವನದಲ್ಲೂ ಅನಿರೀಕ್ಷಿತ ಘಟನೆಗಳಿಂದ ಗುರಿಯನ್ನು ಮುಟ್ಟದೆ ಅರ್ಧಕ್ಕೆ ನಿಲ್ಲುವ ಸಂದರ್ಭ ಒದಗಿ ಬರಬಹುದು. ಇನ್ನು ಮುಂದುವರೆಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಸಿಲುಕುವಂತಹ ಪ್ರಸಂಗಗಳು ಬರಬಹುದು. ವಿದ್ಯೆಯನ್ನು ಅರ್ಧಕ್ಕೆ ನಿಲ್ಲಿಸಿ ಜೀವ ನೋಪಾಯಕ್ಕೆ ಸಿಕ್ಕ ಕೆಲಸಕ್ಕೆ ಸೇರಬಹುದು ಆದರೆ ಇದರಿಂದ ಜೀವನ ಪೂರ್ತಿ ಸಮಾಧಾನ ಸಿಗದೆ ಕೊರಗುವಂತಾಗುತ್ತದೆ.

ಬೆಟ್ಟ ಹತ್ತಿದ ನಂತರ ಬಹಳ ಜಾಗರೂಕರಾಗಿ ಹೆಜ್ಜೆಯನ್ನು ಇಡಬೇಕು ಇಲ್ಲದಿದ್ದಲ್ಲಿ ಕಾಲು ಜಾರಿ ಕೆಳಗೆ ಬೀಳುವ ಸಂದರ್ಭಗಳು ಬರಬಹುದು. ಗುರಿ ಸಾಧಿಸಿದ್ದಾಯಿತು ಇನ್ನು ಯಾರೂ ಹಿಡಿಯುವವರು ಇಲ್ಲ ಎಂಬ ಅಹಂಕಾರದಿಂದ ಮುನ್ನಡೆದರೆ ಜೀವನಕ್ಕೆ ಹಾನಿಯಾಗಬಹುದು.
ಬೆಟ್ಟ ಹತ್ತಿ ಬೆಟ್ಟದ ಮೇಲಿರುವ ದೇವರ ಮೂರ್ತಿಯನ್ನು ನೋಡಬಹುದು. ಆದರೆ, ದೈವ ಸಾಕ್ಷಾತ್ಕಾರವಾಗುವುದಿಲ್ಲ. ದೈವ ಸಾಕ್ಷಾತ್ಕಾರವಾಗಬೇಕಾದರೆ, ಮೆಟ್ಟಿಲಿನಂತಿರುವ ರಾಗದ್ವೇಷಗಳನ್ನು ಮೆಟ್ಟಿ ದೇವರನ್ನು ಪ್ರಾರ್ಥಿಸಿದರೆ ಮಾತ್ರ ದೈವ ಸಾಕ್ಷಾತ್ಕಾರವಾಗುತ್ತದೆ.