Home Local ಸಮುದಾಯ ಭವನ ನಿರ್ಮಾಣ ಮಾಡುವುದು ಬೇಡವೆಂದು ಪ್ರತಿಭಟನೆ.

ಸಮುದಾಯ ಭವನ ನಿರ್ಮಾಣ ಮಾಡುವುದು ಬೇಡವೆಂದು ಪ್ರತಿಭಟನೆ.

SHARE

ಕಾರವಾರ:  ‘ಜೀವನೋಪಾಯಕ್ಕೆ ಸೀಬರ್ಡ್ ನಿರಾಶ್ರಿತರು ಗೂಡಂಗಡಿ ನಿರ್ಮಿಸಿಕೊಂಡಿದ್ದು, ಇದನ್ನು ತೆರವುಗೊಳಿಸಿ ಸಮುದಾಯ ಭವನ ನಿರ್ಮಾಣ ಮಾಡುವುದು ಬೇಡ’ ಎಂದು ಒತ್ತಾಯಿಸಿ ತಾಲ್ಲೂಕಿನ ಮುದಗಾ ಸೀಬರ್ಡ್ ಕಾಲೊನಿಯ ನಿವಾಸಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ನೌಕಾನೆಲೆ ಯೋಜನೆಗಾಗಿ ಮನೆ, ಜಮೀನುಗಳನ್ನು ಬಿಟ್ಟು ಮುದಗಾದ ಸೀಬರ್ಡ್ ಕಾಲೊನಿಯಲ್ಲಿ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಕೆಲವರು ಗೂಡಂಗಡಿ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ಜಾಗದಲ್ಲಿ ಸಭಾಭವನ ನಿರ್ಮಾಣ ಮಾಡಲು ಸ್ಥಳೀಯ ಗ್ರಾಮ ಪಂಚಾಯ್ತಿ ಉದ್ದೇಶಿಸಿದ್ದು, ಜಾಗವನ್ನು ಬಿಟ್ಟುಕೊಡಲು ಆದೇಶಿಸಿದೆ. ಈ ಭಾಗ ದಲ್ಲಿ ಸಮುದಾಯ ಭವನದ ಅವಶ್ಯಕತೆ ಇಲ್ಲ. ಬದಲಾಗಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಬಹುದು ಅಥವಾ ಈಗಿರುವ ಗೂಡಂಗಡಿಯನ್ನು ಮುಂದುವರಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸೂಚಿಸಿ: ‘ಇಲ್ಲಿನ ಆಂಜನೇಯ ದೇವಸ್ಥಾನದ ಬಳಿ ಸಭಾಭವನವಿದ್ದು, ಅಲ್ಲಿ ಬೇಕಾದಷ್ಟು ಸ್ಥಳಾವಕಾಶವಿದೆ. ಅದನ್ನು ಅಭಿವೃದ್ಧಿ ಪಡಿಸಬೇಕು. ಈ ಗೂಡಂಗಡಿಗಳನ್ನು ತೆರವು ಗೊಳಿಸಿದರೆ ಜೀವನೋಪಾಯಕ್ಕೆ ಕಷ್ಟವಾಗುತ್ತದೆ. ಹಿಂದಿನ ಜಿಲ್ಲಾಧಿ ಕಾರಿ ಉಜ್ವಲ್‌ಕುಮಾರ್‌ ಘೋಷ್ ಸ್ಥಳ ಪರಿಶೀಲನೆ ನಡೆಸಿ, ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಅದರ ಸ್ಥಾಪನೆಯ ಪ್ರಸ್ತಾವ ಅರ್ಧಕ್ಕೆ ನಿಂತಿದೆ. ಈಗಲಾದರೂ ಮೀನು ಮಾರುಕಟ್ಟೆ ಒಳಗೊಂಡು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿದರೆ ಗೂಡಂಗಡಿಯವರಿಗೂ, ಮೀನು ಮಾರಾಟ ಮಹಿಳೆಯರಿಗೂ ಅನು ಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಗ್ರಾಮ ಪಂಚಾಯ್ತಿಗೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ‘ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಸಮುದಾಯ ಭವನದ ಬದಲು ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಠರಾವು ಮಾಡಿದರೆ ಮಾತ್ರ ಅದರ ನಿರ್ಮಾಣ ಸಾಧ್ಯ. ಈ ಬಗ್ಗೆ ನಿಮ್ಮ ಗ್ರಾಮ ಪಂಚಾಯ್ತಿಯವರೊಂದಿಗೆ ಚರ್ಚಿಸಿ’ ಎಂದರು. ಮುದಗಾದ ನಿವಾಸಿಗಳಾದ ಉದಯ ತಾಂಡೇಲ್, ಪ್ರಜ್ವಲ್ ಶೇಟ್, ವಿಜಯ್ ಹರಿಕಂತ್ರ, ಚಂದ್ರಕಾಂತ ದುರ್ಗೇಕರ್, ತೇಕು ದುರ್ಗೇಕರ್, ಪರ್ಸು ಹರಿಕಂತ್ರ ಹಾಜರಿದ್ದರು.