Home Local ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಹೊರಟ ‘ಯಂಗ್ ಸೀನಿಯರ್’ ತಂಡ

ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಹೊರಟ ‘ಯಂಗ್ ಸೀನಿಯರ್’ ತಂಡ

SHARE

ದಾಂಡೇಲಿ : ಪುಣಾದ 12 ಜನರ ಹಿರಿಯ ನಾಗರಿಕರ ‘ಯಂಗ್ ಸೀನಿಯರ್’ತಂಡ ‘ಸೈಕ್ಲಿಂಗ್ ಫಾರ್ ಹೆಲ್ತ್’ ಘೋಷಣೆಯೊಂದಿಗೆ ಪುಣಾದಿಂದ ಕನ್ಯಾಕುಮಾರಿವರೆಗೆ 13 ದಿನಗಳ ಸೈಕಲ್ ಜಾಥಾ ಹೊರಟಿದೆ. ಪ್ರತಿನಿತ್ಯ 125 ರಿಂದ 150 ಕಿ.ಮೀ ದೂರ ಸೈಕಲ್ ಮೂಲಕ ಈ ತಂಡದ ಸದಸ್ಯರು ಒಟ್ಟು 1600 ಕಿ.ಮೀ ಕ್ರಮಿಸಲಿದ್ದಾರೆ.

ಪುಣಾದಿಂದ ಹೊರಟ ಈ ತಂಡದವರು ದಾಂಡೇಲಿಗೆ ಆಗಮಿಸಿ ವಿಶ್ರಾಂತಿ ಪಡೆದರು. ನಂತರ ದಾಂಡೇಲಿಯಿಂದ ಪ್ರಯಾಣ ಮುಂದುವರೆಸಿ ಕುಳಗಿ-ಶಿರಸಿ-ಮುರಡೇಶ್ವರ-ಕಾಸರಗೋಡ ಮಾರ್ಗವಾಗಿ ಡಿಸೆಂಬರ 7 ರಂದು ಕನ್ಯಾಕುಮಾರಿ ತಲುಪಲಿದ್ದಾರೆ.

ಸೈಕಲ್ ಜಾಥಾದ ಉದ್ದೇಶ ಆರೋಗ್ಯ ರಕ್ಷಣೆ, ದೇಹದ ಸಧೃಡತೆಯನ್ನು ಕಾಪಾಡುವುದು, ವಾಹನಗಳಿಂದಾಗುವ ವಾಯು ಮಾಲಿನ್ಯ ತಡೆಗಟ್ಟುವದು ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುವದು ಈ ಸೈಕಲ್ ಜಾಥಾದ ಉದ್ದೇಶವಾಗಿದೆ ಎಂದು ತಂಡದ ಹಿರಿಯ ಸದಸ್ಯ ದತ್ತಾತ್ರೆಯ ಮೆಹಂದಲೆ ತಿಳಿಸಿದರು. ಕೇವಲ ಆರು ತಿಂಗಳಿಂದ ಸೈಕಲ್ ಹೊಡೆಯುವದನ್ನು ಕಲಿತು ಈ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದು ಅತಿ ಸಂತೋಷ ತಂದಿದೆ ಎಂದು ಅವಿನಾಶ ಮೆದೆಕರ್ ನುಡಿದರು.

ಖಾಸಗಿ ಕಂಪನಿಯ ನಿವೃತ್ತ ಅಧಿಕಾರಿ ದತ್ತಾತ್ರೇಯ ಮಹಂದಲೆ(77), ನಿವೃತ್ತ ಬ್ಯಾಂಕ್ ಅಧಿಕಾರಿ ಸುಹಾಸ ಸೊಮನ್ (69), ನರ್ಸರಿ ಮಾಲೀಕ ಅನಿಲ ಪಿಂಪಲಿಕರ್(66), ವೈದ್ಯರಾದ ಡಾ. ಸುಭಾಷ ಕೊಂಕಣೆ (65), ತಾಂತ್ರಿಕ ಸಲಹೆಗಾರ ಪದ್ಮಾಕರ ಅಗಸೆ (64), ಅವಿನಾಶ ಮೆದೆಕರ್ (60), ಹಣಕಾಸಿನ ಸಲಹೆಗಾರ ಅರವಿಂದ್ ಚಿತಾಲೆ(60), ನಿವೃತ್ತ ಬ್ಯಾಂಕ್ ಅಧಿಕಾರಿ ಮಿಲಿಂದ್ ಸಂಧಾನೆ (60), ಸಿ.ಎ ಆದ ದತ್ತಾತ್ರೇಯ ಗೋಕಲೆ (59), ಅರಣ್ಯ ಅಧಿಕಾರಿ ವಿಜಯ ಹಿಂಗೆ(57), ಐ.ಟಿ ಸಲಹೆಗಾರ ಪ್ರಶಾಂತ ವಾಶೀಮಕರ್ (53) ಹಾಗೂ ವಾಣಿಜ್ಯೋದ್ಯಮಿ ಕೇಶವ ಜಾಗಿರದಾರ್(46) ಸೈಕಲ್ ಜಾಥಾದಲ್ಲಿ ತೊಡಗಿಕೊಂಡವರು.

ದಾಂಡೇಲಿಗೆ ಆಗಮಿಸಿದ ತಂಡದ ಸದಸ್ಯರನ್ನು ಸ್ವಾಗತಿಸಿದ ವೆಸ್ಟ್‌ ಕೋಸ್ಟ್ ಪೇಪರ್ ಮಿಲ್ಲಿನ ಮಾನವ ಸಂಪನ್ಮೂಲ ಅಧಿಕಾರಿ ಎಸ್.ಎನ್. ಪಾಟೀಲ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿ ಜಾಥಾದ ಸದಸ್ಯರನ್ನು ಬಿಳ್ಕೊಟ್ಟರು.