Home Local ಉತ್ತಮ ಗುಣ ಮಟ್ಟದ ಆಹಾರಕ್ಕಾಗಿ ಸಾವಯವ ಕೃಷಿ ಅಗತ್ಯ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

ಉತ್ತಮ ಗುಣ ಮಟ್ಟದ ಆಹಾರಕ್ಕಾಗಿ ಸಾವಯವ ಕೃಷಿ ಅಗತ್ಯ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

SHARE

ಶಿರಸಿ : ಸಾವಯವ ಕೃಷಿ ಪದ್ಧತಿಯನ್ನು ಆಳವಡಿಸಿಕೊಂಡು ರೋಗ ರುಜುನಿಗಳು ಬರದಂತಹ ಉತ್ತಮ ಗುಣ ಮಟ್ಟದ ಆಹಾರವನ್ನು ಬೆಳೆಯಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಮಳಲಿ ವೀರಭದ್ರೇಶ್ವರ ದೇವಾಲಯದ ಸಭಾಭವನದಲ್ಲಿ ಸೋಮವಾರ ನಡೆದ ಸಾಂಪ್ರದಾಯಿಕ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಮೊದಲಿನಿಂದಲೂ ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಕೃಷಿಯನ್ನು ಮಾಡಲಾಗಿದೆ. ಆದರೆ ಈಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಸಾವಯವ ಕೃಷಿಗೆ ಬರುತ್ತಿದೆ. ಅದನ್ನು ಬೆಳೆಯುವುದರಿಂದ ಉತ್ತಮ ಗುಣಮಟ್ಟದ ಆಹಾರವನ್ನು ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಈಗ ಸಾವಯವ ಬೆಳೆಗಳಿಗೆ ಮಾರುಕಟ್ಟೆಯ ಸಮಸ್ಯೆಯೂ ಇಲ್ಲ. ಇದರೊಂದಿಗೆ ಸರ್ಕಾರವೂ ಸಹ ರೈತರ ಆತ್ಮವಿಶ್ವಾಸ ಹೆಚ್ಚಿಸಲು ಪ್ರಯತ್ನಿಸಬೇಕು ಎಂದ ಅವರು, ಮಳಲಿ ಸಭಾಭವನ ಅಭಿವೃದ್ಧಿಗೆ ಗ್ರಾಮಸ್ಥರ ಬೇಡಿಕೆಯಂತೆ 6 ಲಕ್ಷ ರೂ. ಅನುದಾನವನ್ನು ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ. ಇನ್ನೂ ಬೇಡಿಕೆಗಳಿದ್ದು ಅದನ್ನು ಪರಿಶೀಲನೆ ನಡೆಸಲಾಗುವುದು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಂತೀಯ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ರಾಜ್ಯದಲ್ಲಿ ಒಟ್ಟೂ 14 ಪ್ರಾಂತೀಯ ಒಕ್ಕೂಟದ ವನ್ನು ರಚನೆ ಮಾಡಲಾಗಿದೆ. ಅದರಲ್ಲಿ ನಮ್ಮ ಜಿಲ್ಲೆಯದೂ ಒಂದಾಗಿದೆ. ಇಲ್ಲಿ ಸಾಂಪ್ರದಾಯಿಕ ಬೀಜಗಳನ್ನು ನೀಡಿ, ತರಬೇತಿ ಕೊಟ್ಟು, ಭತ್ತದ ಉತ್ಪನ್ನಗಳನ್ನು ಬೆಳೆಸಿ ಮಾರುಕಟ್ಟೆಯನ್ನೂ ಸಹ ಮಾಡಿಕೊಡಲಾಗುತ್ತದೆ. ಈಗಾಗಲೇ 68 ಪ್ರೋಡಕ್ಟಗಳನ್ನೂ ದೇಶದ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಯುವಕರಿಗೂ ಸಹ ಅನುಕೂಲವಾಗಲಿದೆ ಎಂದರು.

ಮಳಲಿಯಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಸ್ಥಳೀಯವಾಗಿ ಬೆಳೆದ 8 ಸಾಂಪ್ರದಾಯಿಕ ಭತ್ತದ ಬೆಳೆಯನ್ನು ಪ್ರದರ್ಶನಕ್ಕಿಡಲಾಗಿತ್ತು. ಅಲ್ಲಿ ಕೃಷಿ ಇಲಾಖೆ ಹಾಗೂ ಪ್ರಾಂತೀಯ ಒಕ್ಕೂಟದ ಸಹಕಾರದಿಂದ ಜಡ್ಡಕ್ಕಿ, ಬಿಳಿ ಹೆಗ್ಗೆ, ಹೊನ್ನೆಕಟ್ಟು, ಒರಟಗಾ, ಬಾಸುಮತಿ, ಮುಳ್ಳಾರೆ, ಸೇತ್ಗೆ, ಆಲೂರ ಸಣ್ಣ ಬೆಳೆಯಲಾಗಿದೆ.

ಈ ಸಂದರ್ಭದಲ್ಲಿ ಪ್ರಭಾವತಿ ಗೌಡ, ಕಲ್ಪನಾ ಪಟಗಾರ, ಮಹಾಲಕ್ಷ್ಮೀ ಗೌಡ, ಸರಸ್ವತಿ ಹೆಗಡೆ, ಕೆ.ವಿ.ಕೂರ್ಸೆ, ಆರ್.ಡಿ. ಹೆಗಡೆ ಮುಂತಾದವರು ಇದ್ದರು. ಕೃಷಿ ಇಲಾಖೆ ಶಿರಸಿ, ಉತ್ತರ ಕನ್ನಡ ಜಿಲ್ಲಾ ಪ್ರಾಂತೀಯ ಸಾವಯವ ಕೃಷಿಕರ ಸಹಕಾರ ಸಂಘಗಳ ಒಕ್ಕೂಟ, ವೀರಭದ್ರೇಶ್ವರ ಸಾವಯವ ಭಾಗ್ಯ ಯೋಜನಾ ಸಮಿತಿ ಮಳಲಿ ಸಹಯೋಗದಲ್ಲಿ ಮಾರುಕಟ್ಟೆ ಆಧಾರಿತ ಸಾವಯವ ಬೆಳೆಗಳ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಕ್ಷೇತ್ರೋತ್ಸವ ಜರುಗಿತು.