Home Article ನೋಡುಗನ ಕಣ್ಣು ಕಿಟಕಿಯೊಳಗೆ..

ನೋಡುಗನ ಕಣ್ಣು ಕಿಟಕಿಯೊಳಗೆ..

SHARE

ಕಣ್ಣು ಸೃಷ್ಟಿಯ ವೈವಿಧ್ಯಮಯವಾದ ಚಿತ್ರವಿಚಿತ್ರವಾದ ರೂಪವನ್ನು ನೋಡುತ್ತದೆ. ಆ ಕಣ್ಣಿಗೆ ಬಣ್ಣಗಳು, ರೂಪಗಳು, ವೇಷಗಳು, ಸೊಗಸುಗಳು, ಭಾವನೆಗಳು ಹೀಗೆ ಎಲ್ಲವೂ ಗೋಚರಿಸುತ್ತದೆ. ಆ ಕಣ್ಣಿನ ವ್ಯಾಪ್ತಿಯಲ್ಲಿ ಬರುವ ಎಲ್ಲವನ್ನು ತನ್ನೊಳಗೆ ಇಳಿಸಿಕೊಂಡು ಬುದ್ಧಿಗೆ ಕಳಿಸುತ್ತದೆ. ಅಂಥಹ ಒಂದು ಕಣ್ಣಿಗೆ ಕಾಣಿಸುವುದು ಎಷ್ಟು ದೂರ?
ಹೌದು ಕಣ್ಣು ತನ್ನ ವ್ಯಾಪ್ತಿಗೆ ಬರುವುದೆಲ್ಲವನ್ನು ನೋಡುತ್ತದೆ ಮತ್ತು ನಂಬುತ್ತದೆ. ನೋಡುವಾಗ ಯಾವುದೇ ಬೇಧ ಭಾವ ಇಲ್ಲ. ಅದನ್ನು ನೋಡಿ ಮನಸ್ಸಿನಾಳಕ್ಕೆ ಕಳಿಸಿದಾಗ ಮಾತ್ರ ನೋಡಿದ ವಸ್ತುವಿನ ಸೌಂದರ್ಯ, ಭೀಕರತೆ, ಆಳ ಅರ್ಥವಾಗುವುದು. ಅಂದರೆ ಕಣ್ಣು ಎಲ್ಲವನ್ನು ನೋಡುತ್ತದೆ ಆದರೆ ಅದರ ವ್ಯಾಪ್ತಿಯಲ್ಲಿ ಬಂದರೆ ಮಾತ್ರ.

ಒಬ್ಬ ಕವಿ ಕಲ್ಪನೆಯಲ್ಲಿ ಕವನ ರಚಿಸುತ್ತಾನೆ ಅನ್ನುವುದಿದೆ. ಆ ಕಲ್ಪನೆಗಳೆಲ್ಲವೂ ನಿಜವಾಗಿರುವುದಿಲ್ಲ. ಆಕಾಶದಲ್ಲಿ ಹಾರುವೆ ನಾನು ಎಂದರೆ ಮನುಷ್ಯ ಆಕಾಶದಲ್ಲಿ ರೆಕ್ಕೆ ಕಟ್ಟಿಕೊಂಡು ಹಾರಲು ಸಾಧ್ಯವಿಲ್ಲ ಎನ್ನುವುದು ಗೊತ್ತು. ಆದರೆ ಆತ ಆಕಾಶ ವೀಕ್ಷಿಸಿದ್ದಾನೆ. ಅಲ್ಲಿ ಹಕ್ಕಿಗಳು ಸ್ವಚ್ಚಂದವಾಗಿ ಹಾರುವುದನ್ನು ತನ್ನ ಅಕ್ಷಿಯಿಂದ ನೋಡಿದ್ದಾನೆ. ಆ ಹಕ್ಕಿಯಂತೆ ನಾನು ಅಲ್ಲಿರಬೇಕು ಎಂದು ಬಯಸುತ್ತಾನೆ. ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಭಾವನೆಯಲ್ಲಿ ತಾನು ಆಕಾಶದಲ್ಲಿ ಹಾರುತ್ತಾನೆ. ಇಲ್ಲಿ ಅವನಿಗೆ ಕಂಡಿದ್ದು ಸ್ವಚ್ಛ ಆಕಾಶ ಮತ್ತು ಹಕ್ಕಿ ಮಾತ್ರ. ಅದಲ್ಲೂ ಮೀರಿ ಮತ್ತೇನನ್ನು ಉಹಿಸಲಾರ.

ಅಂದರೆ ಒಂದು ಕಿಟಕಿ ಇದೆ ಎಂದರೆ ಅದರಲ್ಲಿ ಕಂಡಿರುವುದು ಒಂದೆರಡು ಮರ ಬಳ್ಳಿ ಹೂ, ಅಂಗಳದಲ್ಲಿ ಆಡುವ ಮಗು ಆಟಿಕೆ, ಬೀಸುವ ಗಾಳಿ. ಆದರೆ ಆ ಕಿಟಕಿಯಿಂದ ಆಚೆಗೂ ಒಂದು ವ್ಯವಸ್ಥೆಯಿದೆ. ಆದರೆ ಅದು ಕಣ್ಣಿನ ವ್ಯಾಪ್ತಿಗೆ ಬಂದಿಲ್ಲ. ಹಾಗಾಗಿ ಈ ಕಿಟಕಿಯಿಂದ ಕಾಣುವುದೆಲ್ಲ ಸರಿ. ಹಾಗಾಗಿ ತನಗೆ ಎಲ್ಲ ಗೊತ್ತು ಎಂದು ಹೇಳುತ್ತಾನೆ.
ಆದರೆ ಕಣ್ಣು ಸ್ಪಷ್ಟತೆಯನ್ನು ನೀಡುತ್ತದೆ. ನಾವು ನೋಡುವ ಆ ಕಿಟಕಿ ಎನ್ನುವದಿದೆಯಲ್ಲ ಅಲ್ಲಿ ಏನೆಲ್ಲ ಇದೆಯೋ ಅದೆಲ್ಲವನ್ನು ಚಾಚು ತಪ್ಪದೇ ತಿಳಿಸುತ್ತದೆ. ಅದನ್ನು ನೋಡಬೇಡ ಇದನ್ನು ನೋಡು ಎಂದು ಬುದ್ಧಿ ಸೂಚಿಸಿದಾಗ ಮಾತ್ರ ತಿರುಗುತ್ತದೆ ಹೊರತು ಕಣ್ಣಿನ ನೋಟ ತಾನಾಗೆ ಸರಿದು ನಿಲ್ಲುವುದಿಲ್ಲ.

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ “ಅಬ್ಬ ನಾನು ಇಲ್ಲೆ ಇದ್ದರೂ ಇದ್ದನ್ನು ನೋಡಿಯೇ ಇಲ್ಲವಲ್ಲ” ಎಂದು. ಹೌದು ಕಣ್ಣು ನೋಡಿ ಇದೊಂದು ವಸ್ತು ಇದೆ ಎಂದು ತಿಳಿಸಿದರೆ ಮಾತ್ರ ಬುದ್ಧಿ ಮತ್ತು ಮನಸ್ಸಿಗೆ ಅರ್ಥವಾಗುವುದು. ಕಣ್ಣಿಗೆ ಗೋಚರವಾಗದಿದ್ದರೆ ಆ ವಸ್ತು ಇದ್ದು ಇಲ್ಲದಂತೆ ಆ ಮನುಷ್ಯನಿಗೆ. ಇನ್ನು ಕಣ್ಣೇ ಕಾಣದವರು ವಸ್ತುಸ್ಥಿತಿ ಅರಿಯುತ್ತಾg,É ಗುರುತಿಸುತ್ತಾರೆ ಎನ್ನುವುದು ಒಂದು ಪ್ರಶ್ನೆ. ನಿಜ ಅವರ ಕಣ್ಣಿಗೆ ಯಾವದೇ ಬಣ್ಣ, ಆಕಾರ, ಬೆಳಕು ಕಾಣಿಸುವುದೇ ಇಲ್ಲ. ಆದರೂ ಅವರೂ ಕೂಡ ನೋಡುತ್ತಾರೆ. ಅಂತರ್ಯದ ಕಣ್ಣು ಅವರಿಗೆ ಅದೇ ಕಿಟಕಿಯಿಂದ ಎಲ್ಲವನ್ನು ತೋರಿಸುವ ಗುರುತಿಸುವ ಕೆಲಸ ಮಾಡುತ್ತದೆ.

ಸಿನೆಮಾ ಪ್ರಪಂಚದಲ್ಲಿ ಎಲ್ಲಾ ದಿಕ್ಕಿನಲ್ಲಿ ಕಾಲಿರಿಸಿ ಹೆಸರುಗಳಿಸಿದ ಶ್ರೀ ಯೋಗರಾಜ್ ಭಟ್ಟರು “ನಮ್ಮ ಜಗತ್ತು ಮಾಯಾಲೋಕ. ಆದರೆ ನಾವು ಒಂದು ಕಥೆಯನ್ನೋ ಅಥವಾ ಒಂದು ಹಾಡನ್ನೋ ಬರೆಯಬೇಕು ಎಂದು ಕುಳಿತರೆ ಅಲ್ಲಿ ಒಂದು ಕಿಟಕಿಯನ್ನು ಹುಡುಕುತ್ತೇವೆ. ಆ ಕಿಟಕಿಯಲ್ಲಿ ಕಾಣುವ ಎಲ್ಲವನ್ನು ಇಟ್ಟುಕೊಂಡು ಒಂದು ಕಥೆ ಹೆಣೆಯುವುದು ಅಥವಾ ಒಂದು ಹಾಡು ಬರೆಯುವುದು ಮಾಡುತ್ತೇವೆ. ಅಂದರೆ ನಮ್ಮನಮ್ಮ ಪ್ರಪಂಚ ಎನ್ನುವುದು ಏನಿದೆಯೋ ಅದರಲ್ಲಿ ಎಲ್ಲವನ್ನು ಸೆರೆಹಿಡಿಯುವುದು ಕಣ್ಣಿನ ಕೆಲಸ. ಹಾಗಾಗಿ ಕಿಟಕಿಯಲ್ಲಿ ಕಾಣುವಷ್ಟು ದೂರ ನಮ್ಮ ಪ್ರಪಂಚ. ಅದನ್ನು ಮೀರಿ ನಾವು ಯಾರೂ ಕೂಡ ಹೋಗಲಾಗದು. ನಮ್ಮ ಕಿಟಕಿಯಲ್ಲಿ ಕಾಣುವುದು ಈಗಿನ ಹುಡುಗರು ಬಯಸುತ್ತಿರುವ ಹಾಡು ಮತ್ತು ಕಥೆಗಳು. ಹಾಗಾಗಿ ಅದಕ್ಕೆ ತಕ್ಕುದಾದ ಪಾತ್ರವನ್ನು ಡೈಲಾಗನ್ನು ಬರೆಯುತ್ತೇವೆ.” ಎಂದು ಹೇಳಿದ್ದರು.

ಈಗಿನ ಸಿನೆಮಾಗಳು ಹೆಚ್ಚಿನದಾಗಿ ರೌಡಿಸಂ ಇಲ್ಲವೇ ಪ್ರೀತಿಪ್ರೇಮ ಎನ್ನುವ ವಿಷಯದ ಮೇಲೆ ಇರುತ್ತದೆ. ಪುರಾಣ ಕಥೆಗಳ ಚಿತ್ರಗಳು ಬಂದರೆ ಅದು ಎರಡು ದಿನವೂ ಓಡುವುದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆ ಓಡುವ ಚಿತ್ರ ಬರಬೇಕಾದರೆ ಅದಕ್ಕೆ ಕೋಟಿ ಕೋಟಿ ಸುರಿದು ಅದ್ದೂರಿ ಚಿತ್ರವಾಗಿಸಬೇಕು. ಯುವಕರ ಮನಸೆಳೆಯುವ ಕಲಾಕೃತಿ ಅಲ್ಲಿರಬೇಕು ಆಗ ಮಾತ್ರ ಒಂದುಷ್ಟು ಲಾಭ ಬರಬಹುದು. ಅದು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಕಡಿಮೆ ಬಜೆಟ್ಟಿನಲ್ಲಿ ಈಗಿನ ಜನತೆ ನೋಡುವಂಥದ್ದು ಎಂದರೆ ಈ ರೀತಿಯ ಪ್ರೀತಿ ಪ್ರೇಮದ ಕಥೆಗಳು. ಹಾಗಾಗಿ ಕಥೆಗಾರ ಒಂದು ಚೌಕಟ್ಟು ಹಾಕಿ ಕಿಟಕಿಯನ್ನು ರಚಿಸಿಕೊಂಡು ಕಥೆ ಬರೆಯಲು ಪ್ರಾರಂಭೀಸುತ್ತಾನೆ. ಅಲ್ಲಿ ಕಾಣುವುದನ್ನು ಇಟ್ಟುಕೊಂಡು ತನ್ನ ಲೇಖನಿಯ ಮೂಲಕ ಕಥೆಗೆ ಒಂದು ರೂಪ ಕೊಡುತ್ತಾನೆ.

ಕಣ್ಣು ಆಕಾಶವನ್ನು ನೋಡಿದಾಗ ಎಷ್ಟು ದೂರ ಕ್ರಮಿಸಿರಬಹುದು ಈ ದೃಷ್ಟಿ ಎಂದು ಅರ್ಥವಾಗುವುದಿಲ್ಲ. ಆದರೆ ಆ ದೃಷ್ಟಿ ಎನ್ನುವುದು ಒಂದು ಹಂತದವರೆಗೆ ಮಾತ್ರ ಚಲಿಸುತ್ತದೆ. ನಂತರ ಆಕಾಶ ನೀಲಿಯಾಗುತ್ತದೆ. ನಾವು ಏನೇ ನೋಡಿದ್ದೇವೆ ಎಂದುರೂ ಸಹ ಕಿಟಕಿಯ ಚೌಕ ದಾಟಿ ನಮ್ಮ ದೃಷ್ಟಿ ಹೋಗಿರುವುದೇ ಇಲ್ಲ. ಆದರೆ ನೋಡುಗನ ಕಣ್ಣು ಯಾವಾಗಲೂ ಕಿಟಕಿಯ ಆಚೆ ಏನಿದೆ ಎಂದು ಹುಡುಕುತ್ತಲೇ ಇರುತ್ತದೆ.