Home Local ಕುಮಟಾದ ಕೊಂಕಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಕುಮಟಾದ ಕೊಂಕಣದಲ್ಲಿ ವಿಶ್ವ ಪರಿಸರ ದಿನಾಚರಣೆ

SHARE

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿಎಸ್.ಕೆ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸಮಿತಿ, ನ್ಯಾಯವಾದಿಗಳ ಸಂಘ,ಅಭಿಯೋಜನಾ ಇಲಾಖೆ, ಹಾಗೂ ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆಯ ಕುರಿತು ಕಾನೂನು ಸಾರಕ್ಷತಾ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ನ್ಯಾಯಾಧೀಶರು, ಪ್ರ.ದ.ನ್ಯಾ.ದಂಡಾಧಿಕಾರಿಗಳಾದ ಶ್ರೀಮತಿ ಮೋಹನಕುಮಾರಿ ಎನ್. ಬಿ. ಇವರು, ಪರಿಸರವನ್ನು ಪ್ರತಿದಿನ ಪ್ರೀತಿಸಿ ಬರಿದಾಗುವ ಸಂಪನ್ಮೂಲಗಳನ್ನು ಉಳಿಸಿ-ಬೆಳೆಸಿದಾಗ ಮಾತ್ರ ಮುಂದಿನ ದಿನಗಳು ಸುಭಿಕ್ಷವಾಗಿರಬಲ್ಲವು ಎಂದು ಸೂಕ್ತ ದೃಷ್ಟಾಂತಗಳ ಮೂಲಕ ವಿವರಿಸಿದರು.

ನಂತರ ವಿಶ್ವ ಪರಿಸರ ಕುರಿತು ಮಾತನಾಡಿದ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಚಂದ್ರಶೇಖರ್ ಎಚ್. ಎಸ್. ರವರು ಕಾನೂನು ಹಾಗೂ ಪಾಲನೆ ಕುರಿತು ವಿವರಿಸಿದರು. ವಕೀಲರಾದ ಶ್ರೀಮತಿ ಮಮತಾ ಆರ್. ನಾಯ್ಕ ಇವರು ವಿಶ್ವ ಪರಿಸರ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಐ. ನಾಯ್ಕ ಮಾತನಾಡಿ, ಇಂದು ಪರಿಸರವನ್ನು ಹೇಗೆ ಕಲುಷಿತಗೊಳಿಸುತ್ತಿದ್ದೇವೆ ಮತ್ತು ಅದರ ನಿವಾರಣೋಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಾಶೀನಾಥ ನಾಯಕರವರು ಮಾತನಾಡಿ ಪರಿಸರ ಸಂರಕ್ಷಣೆಯ ಬಗ್ಗೆ ಕಿವಿ ಮಾತುಗಳನ್ನು ಹೇಳಿದರು.

ವೇದಿಕೆಯಲ್ಲಿ ಟ್ರಸ್ಟಿನ ವಿಶ್ವಸ್ಥರುಗಳಾದ ಶ್ರೀ ವಿ.ಆರ್.ನಾಯಕ, ಕುಮಟಾ ಆರ್.ಎಫ್.ಓ. ಕಿರಣ ಬಾಬು, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ಇವರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು, ಶಿಕ್ಷಕ ಚಿದಾನಂದ ಭಂಡಾರಿ ವಂದಿಸಿದರು. ಕುಮಾರಿ ದಿಶಾ ಭಟ್ಟ ಹಾಗೂ ಸಂಗಡಿಗರು ಪ್ರಾರ್ಥನೆ ಮತ್ತು ಪರಿಸರ ಗೀತೆ ಹಾಡಿದರು.