Home Important ಹೊನ್ನಾವರ ಮಾಗೋಡಿನ ಬಾಲಕಿಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ!

ಹೊನ್ನಾವರ ಮಾಗೋಡಿನ ಬಾಲಕಿಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ!

SHARE

ಹೊನ್ನಾವರ: ಪರೇಶ್ ಮೇಸ್ತ ಸಾವಿನ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಹೊನ್ನಾವರದ ಗ್ರಾಮೀಣ ಭಾಗದಲ್ಲಿ ಶಾಲಾ ಬಾಲಕಿಯೋರ್ವಳಿಗೆ ಚೂರಿಯಿಂದ ಗಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಘಟನೆಯ ರಹಸ್ಯವನ್ನು ಭೇದಿಸಿದ್ದಾರೆ. ಆದರೆ ಈ ರಹಸ್ಯ ಈ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದೆ ಹಾಗೂ ಘಟನೆಗೆ ಬಿಗ್ ಟ್ವಿಸ್ಟ ನೀಡಿದೆ.

ನಿಜವಾಗಿಯೂ ನಡೆದದ್ದು ಏನು ಗೊತ್ತಾ?

ಬಾಲಕಿಯು ತನ್ನ ಮನೆಯಿಂದ 8 ಕಿಲೊಮೀಟರ್ ದೂರ ಇರುವ ಶಾಲೆಗೆ ಕಾಡಿನ ರಸ್ತೆಯಲ್ಲಿ ನಿತ್ಯವೂ ನಡೆದುಕೊಂಡು ಹೋಗುತ್ತಾಳೆ. ಇದನ್ನು ಗಮನಿಸಿದ್ದ ಮಾಗೋಡು ವ್ಯಾಪ್ತಿಯ ಬಜ್ಜಿಕೇರಿ ಎಂಬಲ್ಲಿನ ಬಾಲಕಿಯ ಸ್ವಜಾತಿಯವನೇ ಆಗಿರುವ ಗಣೇಶ್ ಈಶ್ವರ ನಾಯ್ಕ ಎಂಬಾತ ನಿರಂತರವಾಗಿ ಬಾಲಕಿಯನ್ನು ಅಡ್ಡಗಟ್ಟಿ ತನ್ನ ಕಾರು ಅಥವಾ ಬೈಕ್‌ನಲ್ಲಿ ಬರುವಂತೆ ಒತ್ತಾಯಿಸುತ್ತಿದ್ದ. ನನ್ನ ಜೊತೆ ಬಾ, ಸುತ್ತಾಡು, ಪ್ರೀತಿ ಮಾಡುತ್ತಿದ್ದೇನೆ ಎಂದೆಲ್ಲ ಒತ್ತಾಯಿಸುತ್ತಿದ್ದ. ‘ನಿನಗ್ಯಾಕೆ ಇಷ್ಟು ಸೊಕ್ಕು, ನನ್ನ ಜೊತೆ ಬಾ’ ಎಂದು ಆಗಾಗ ಪೀಡಿಸುತ್ತಿದ್ದ ಎನ್ನಲಾಗಿದೆ. ಬಾಲಕಿ ಆತನ ಕಿರುಕುಳದಿಂದ ಬೇಸತ್ತು ಆ ವಿಷಯವನ್ನು ತನ್ನ ತಾಯಿಗೆ ಹೇಳಿದ್ದಳು. ಈ ವಿಷಯವನ್ನು ಬಾಲಕಿಯ ತಾಯಿ ಗ್ರಾಮ ಪಂಚಾಯತ್ ಸದಸ್ಯರೋರ್ವರ ಬಳಿ ಹೇಳಿದ್ದು ಅವರು ಗಣೇಶ ಈಶ್ವರ ನಾಯ್ಕನಿಗೆ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದ್ದರು.

ಹೊನ್ನಾವರ ಗಲಭೆಯ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನ ಶಾಲೆಗೆ ಹೋಗದ ಬಾಲಕಿ ಡಿಸೆಂಬರ್ 14ರಂದು ಶಾಲೆಗೆ ಹೋಗಬೇಕಾಗಿತ್ತು. ಅಂದು ಪರೀಕ್ಷೆಯೂ ಇತ್ತು. ಈ ಸಂದರ್ಭದಲ್ಲಿ ಮತ್ತೆ ಗಣೇಶ್ ಈಶ್ವರ ನಾಯ್ಕ ತನಗೆ ಕಿರುಕುಳ ನೀಡಬಹುದು ಎಂದು ಬಾಲಕಿ ಆತಂಕಗೊಂಡಿದ್ದಾಳೆ. ತಾನು ಬದುಕಬಾರದು, ಬದುಕಿದರೆ ಆತ ತನಗೇನಾದರೂ ಮಾಡಿಯಾನು ಎಂಬ ಭಯದಲ್ಲಿ  ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ತಾನೇ ತಂದಿದ್ದ ನಿಂಗೆ ಹಣ್ಣಿನ ಮುಳ್ಳಿನಿಂದ ಎರಡೂ ಕೈಗಳಿಗೆ ತಾನೇ ಗಾಯಮಾಡಿಕೊಂಡಿದ್ದಾಳೆ. ಬಳಿಕ ತನ್ನ ತಪ್ಪಿನ ಅರಿವಾಗಿ ಅದೇ ಗಾಯದೊಂದಿಗೆ ಶಾಲೆಗೆ ಹೋಗಿದ್ದಾಳೆ.

ಸುಳ್ಳು ಸುದ್ದಿ ಹರಡಿದ್ದು ಯಾರು? ಏನು? ಗೊತ್ತಾ

ಅದೇ ದಿನ ಸಂಜೆ ಶಾಲೆಯಿಂದ ಮಾಗೋಡಿಗೆ ವಾಪಸ್ ಬಂದ ನಂತರ ಕೈಗೆ ಸುತ್ತಿಕೊಳ್ಳಲು ಬ್ಯಾಂಡೇಜ್ ತರುವಂತೆ ಸ್ನೇಹಿತೆಯನ್ನು ಕಳುಹಿಸಿದ್ದಾಳೆ. ಸ್ನೇಹಿತೆ ತಂದ ಬ್ಯಾಂಡೇಜ್ ಸಣ್ಣದಾಗಿದೆ ಎಂದು ಮತ್ತೆ ಅಂಗಡಿಗೆ ಆಕೆಯನ್ನು ವಾಪಸ್ ಕಳುಹಿಸಿದಾಗ ಅಂಗಡಿಯವನೇ ಗಾಯಗೊಂಡ ಬಾಲಕಿಯನ್ನು ಕರೆಯಿಸಿ ಗಾಯ ಪರೀಕ್ಷಿಸಿದ್ದಾನೆ.

ಗಾಯ ಹೇಗಾಗಿದೆ ಎಂಬ ಬಗ್ಗೆ ಬಾಲಕಿಯನ್ನು ಕೇಳದೆ ‘ನಿನ್ನ ರಾತ್ರಿ ಯಾರೋ ಇಬ್ಬರು ಅಪರಿಚಿತರು  ಕೊಡ್ಲಗದ್ದೆಗೆ ಕಡೆಗೆ ಹೋಗುವುದನ್ನು ನಾನು ನೋಡಿದ್ದೇನೆ. ಅದರಲ್ಲಿ ಒಬ್ಬನಿಗೆ ಗಡ್ಡ ಇತ್ತು, ಒಬ್ಬ ಸಪೂರ ಇದ್ದ’ ಎಂದು ಕಥೆ ಕಟ್ಟಿದ್ದಾನೆ. ಗ್ರಾಮಸ್ಥರಿಗೂ ನಂಬಿಸಿದ್ದಾನೆ. ಕೆಲ ಗ್ರಾಮಸ್ಥರೂ ಸಹ ಆತನ ಮಾತನ್ನು ನಂಬಿ ಅನ್ಯ ಕೋಮಿನ ವ್ಯಕಿಗಳೇ ಇದನ್ನು ಮಾಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಮೊದಲೇ ಭಯ ಮತ್ತು ಗೊಂದಲದಲ್ಲಿದ್ದ ಬಾಲಕಿ ತನ್ನ ತಪ್ಪನ್ನು ಮರೆಮಾಚಿ ಜನರು ಮಾತಾಡಿಕೊಂಡ ವಿಚಾರವನ್ನೇ ನೆನಪಿಟ್ಟುಕೊಂಡು ಪೊಲೀಸರಿಗೆ ಅದೇ ಹೇಳಿಕೆ ನೀಡಿದ್ದಾಳೆ.

ವೈದ್ಯರ ವರದಿ ಏನೆನ್ನುತ್ತೆ ಗೊತ್ತಾ?

ತಜ್ಞ ವೈದ್ಯರಿಂದ ಬಾಲಕಿಯ ಕೈಗಳ ಮೇಲೆ ಆದ ಗಾಯಗಳನ್ನು ಪರೀಕ್ಷೆ ಮಾಡಿ ಅದು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳು (hesitation injury mark) ಎಂದು ದೃಢಪಡಿಸಿದ್ದಾರೆ. ಆಪ್ತ ಸಮಾಲೋಚನೆಯ ವೇಳೆ ಬಾಲಕಿ ತಾನು ಸ್ವತಃ ಗಾಯ ಮಾಡಿಕೊಂಡಿದ್ದನ್ನು ಒಪ್ಪಿದ್ದಾಳೆ. ನ್ಯಾಯಾಧೀಶರ ಎದುರಿಗೂ ಹಾಗೆಯೆ ಹೇಳಿಕೆ ನೀಡಿದ್ದು ಗಣೇಶ್ ಈಶ್ವರ ನಾಯ್ಕ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಹೀಗೆ ಮಾಡಿಕೊಂಡೆ ಎಂದು ಹೇಳಿದ್ದಾಳೆ.

ಇದೀಗ ಬಾಲಕಿ ಪೊಲೀಸರಿಗೆ ಪೂರ್ಣ ಮಾಹಿತಿ ನೀಡಿದ್ದು ಪೋಲೀಸರ ತನಿಖೆಯಿಂದ ಮಾಹಿತಿ ಹೊರಬಂದಂತಾಗಿದೆ.

ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಾಲಕಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.