Home Local ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ಪಡೆಯಲು ಹೊಸ ವ್ಯವಸ್ಥೆ ಅಳವಡಿಕೆ : ಅಭಿರಾಮ್

ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ಪಡೆಯಲು ಹೊಸ ವ್ಯವಸ್ಥೆ ಅಳವಡಿಕೆ : ಅಭಿರಾಮ್

SHARE

ಸಿದ್ದಾಪುರ: ಪಟ್ಟಣದ ಕುಮಟಾ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ಪಡೆಯಲು ಹೊಸ ವ್ಯವಸ್ಥೆ ಅಳವಡಿಕೆಯಾಗಲಿದೆ. ಇಡೀ ತಾಲ್ಲೂಕಿಗೆ ವಿದ್ಯುತ್ ಸರಬರಾಜು ಮಾಡುವ ಗ್ರಿಡ್‌ನಲ್ಲಿ (110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ) ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಶಿರಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿದ್ದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಈ ಕಾಮಗಾರಿಗೆ ₹ 2.43ಕೋಟಿ ಅನುದಾನ ನಿಗದಿ ಮಾಡಿದೆ.

‘ ಜೋಗದಿಂದ ಸಿದ್ದಾಪುರ ಹಾಗೂ ಶಿರಸಿಗೆ ಎನ್‌ಕೆ 1 ಹಾಗೂ ಎನ್‌ಕೆ 2 ಎಂಬ ಎರಡು ವಿದ್ಯುತ್ ಮಾರ್ಗಗಳು ಇದೆ. ಆದರೆ ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಜೋಗದಿಂದ ವಿದ್ಯುತ್ ಪಡೆಯಲು ಒಂದೇ ಜಾಲದ (ಸರ್ಕಿಟ್‌) ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗುತ್ತಿದ್ದು, ಎರಡು ಕಡೆಗಳಿಂದಲೂ ವಿದ್ಯುತ್‌ ಪಡೆಯುವ ಜಾಲವನ್ನು ವ್ಯವಸ್ಥೆ ಮಾಡುವುದು ಈ ಕಾಮಗಾರಿಯ ಮುಖ್ಯ ಉದ್ದೇಶ’ ಎಂದು ಹೆಸ್ಕಾಂ ಉಪವಿಭಾಗದ ಸಹಾಯಕ ಎಂಜಿನಿಯರ್ ಅಭಿರಾಮ್ ವಿವರಿಸಿದರು.

‘ಲಿಲೋ ಸಿಸ್ಟಮ್’ ಎಂದು ಕರೆಯಲಾಗುವ ಈ ವ್ಯವಸ್ಥೆಯಡಿ ಹಳೆಯ ಬ್ರೇಕರ್ಸ್ ತೆಗೆದು, ಹೊರಗಡೆ ಹೊಸ ಬ್ರೇಕರ್ಸ್ ಅಳವಡಿಸಲಾಗುತ್ತದೆ. ಇದರಿಂದ ಶಿರಸಿಗೆ ಪೂರೈಕೆ ಮಾಡುವ ಎನ್‌ಕೆ–2 ನೇರ ಮಾರ್ಗದಿಂದಲೂ ವಿದ್ಯುತ್ ಸರಬರಾಜು ಪಡೆಯಲು ಸಾಧ್ಯವಾಗುತ್ತದೆ’ ಎಂದು ಶಾಖಾಧಿಕಾರಿ ಜಗದೀಶ್ ವಿವರಣೆ ನೀಡಿದರು.

‘ಈ ವ್ಯವಸ್ಥೆ ಅಳವಡಿಕೆಯಿಂದ ಪಟ್ಟಣದ ಗ್ರಿಡ್‌ಗೆ ವಿದ್ಯುತ್ ಪಡೆಯಲು ಎರಡು ಜಾಲಗಳು ದೊರೆಯುತ್ತವೆ.ಈ ಕಾಮಗಾರಿ ಪೂರ್ಣವಾದ ನಂತರ ಪರ್ಯಾಯ ಮಾರ್ಗ ಲಭ್ಯವಾಗುವುದರಿಂದ ಪಟ್ಟಣದ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಪಡೆಯಲು ಹೆಚ್ಚಿನ ಅವಕಾಶ ಲಭ್ಯವಾಗುತ್ತದೆ’ ಎಂದು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಟಿ.ಹೆಗಡೆ ಹೇಳಿದರು.

‘ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸ ವ್ಯವಸ್ಥೆ ಅಳವಡಿಕೆ ಮಾಡುವುದರಿಂದ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಉಂಟಾಗುವ ಸಮಸ್ಯೆಯೂ ಕಡಿಮೆಯಾಗುತ್ತದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಟಿ.ಹೆಗಡೆ ಅಭಿಪ್ರಾಯಪಟ್ಟರು.