ದಾಂಡೇಲಿ : ಧಾರವಾಡದಿಂದ ಪ್ರವಾಸಕ್ಕೆಂದು ಕುಟುಂಬಸ್ಥರ ಜೊತೆ ದಾಂಡೇಲಿಗೆ ಬಂದಿದ್ದ ಯುವತಿಯರಿಬ್ಬರು ನೀರು ಪಾಲದ ಮನಕಲುಕುವ ಹೃದಯವಿದ್ರಾವಕ ಘಟನೆ ಸೋಮವಾರ ಮೌಳಂಗಿಯಲ್ಲಿ ನಡೆದಿದೆ.

ಧಾರವಾಡದ ಮರಾಠಾ ಕಾಲೋನಿ ನಿವಾಸಿಗಳಾದ ಒಂದೆ ಕುಟುಂಬದ ಪದ್ಮಪ್ರಿಯ ಅರುಣ್ ಪಾಟೀಲ (ವ:21) ಮತ್ತು ರಜನಿ ಆನಂದ ಪಾಟೀಲ (ವ:22) ಮೃತ ದುರ್ದೈವಿಗಳಾಗಿದ್ದು, ಇವರು ಸೋಮವಾರ ಪ್ರವಾಸಕ್ಕೆಂದು ದಾಂಡೇಲಿಯ ಮೌಳಂಗಿ ಇಕೋ ಪಾರ್ಕಿಗೆ ಆಗಮಿಸಿದ್ದರು. ಅಲ್ಲಿ ಕಾಳಿ ನದಿಗಿಳಿದಿದ್ದ ಇವರುಗಳು ನೀರು ಕಡಿಮೆ ಇದ್ದ ಕಾರಣಕ್ಕಾಗಿ ನದಿಯಲ್ಲಿ ಮುಂದೆ ಹೋಗಿದ್ದರು. ಆದರೆ ನದಿಯಲ್ಲಿ ಅಲ್ಲಲ್ಲಿ ಏರು ತಗ್ಗುಗಳಿರುವುದರಿಂದ ಮತ್ತು ಈಜು ಬಾರದಿರುವುದರಿಂದ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಲ್ಲಿ ನೆರೆದಿದ್ದ ಪ್ರವಾಸಿಗರು ಎಚ್ಚರಿಕೆ ನೀಡಿದ್ದಾರದಾರೂ ಅದನ್ನು ಗಮನಿಸದ ಇವರುಗಳು ನದಿಯಲ್ಲಿ ಮುಂದೆ ಹೋಗಿರುವುದೆ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಮೃತರ ಶರೀರವನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

RELATED ARTICLES  ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆ ಜುಲೈ 27ರಿಂದ

ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಪಿಐ ವೀರಣ್ಣ ಹಳ್ಳಿಯವರ ಮಾರ್ಗದರ್ಶನದಲ್ಲಿ ಪಿಎಸೈ ಕೊಣ್ಣೂರು ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ನದಿಯಲ್ಲಿ ನೀರು ಇಲ್ಲದಿದ್ದರೂ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಅಲ್ಲಲ್ಲಿ ಸೂಚನಾ ಫಲಕಗಳಿದ್ದರೂ ಪ್ರವಾಸಿಗರು ಈ ಬಗ್ಗೆ ಗಮನ ಕೊಡದೆ ನಿರ್ಲಕ್ಷ್ಯ ವಹಿಸುವುದೆ ಈ ರೀತಿಯ ಘಟನೆಗಳಿಗೆ ಕಾರಣವೆಂದು ತಿಳಿದುಬರುತ್ತಿದೆ.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ಶಾಂತವೀರ ಸ್ವಾಮೀಜಿ

ಮೌಳಂಗಿ ಇಕೋ ಪಾರ್ಕಿನ ಅಭಿವೃದ್ಧಿ ಸಮಿತಿಯವರು ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಇನ್ನಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಮತ್ತು ಸುರಕ್ಷಾ ಸಿಬ್ಬಂದಿಗಳನ್ನು ನೇಮಿಸಬೇಕೆಂಬ ಆಗ್ರಹವು ಕೇಳಿ ಬರುತ್ತಿದೆ. ಈಗಾಗಲೆ ಮೌಳಂಗಿ ಇಕೋ ಪಾರ್ಕ್ ಆರಂಭವಾದಗಿನಿಂದ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿ ಕುಡಿತ ಮೋಜು ಮಸ್ತಿಗಳಿಗೆ ಕಡಿವಾಣ ಹಾಕಬೇಕಾದ ಗುರುತರ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ.