ಶಿರಸಿ : ಈಗಿರುವ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಮುಂದುವರೆಯಲು ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಕೌಶಲ್ಯ ತರಬೇತಿ, ಮಹಿಳೆಯರಿಗೆ ಶಿಕ್ಷಣ, ವಿವಿಧ ವಿಷಯಗಳ ಬಗ್ಗೆ ಶಿಕ್ಷಣ ಸೇರಿದಂತೆ ಅಸಂಪ್ರದಾಯಿಕ ಶಿಕ್ಷಣವನ್ನು ನೀಡಬೇಕು ಎಂದು ಸಿದ್ದಾಪುರ ಮಾಧ್ಯಮಿಕ ಶಿಕ್ಷಣ ಪ್ರಸಾರ ಸಮಿತಿಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ತಾಲೂಕಿನ ಗೋಳಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಎರಡನೇ ದಿನದಂದು ಸಭಾ ಕಾರ್ಯಕ್ರನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಅಸಂಪ್ರದಾಯಿಕ ಶಿಕ್ಷಣ ನೀಡಿದಾಗ ಮಾತ್ರ ಹಿರಿಯರು ರಕ್ತ ಸುರಿಸಿ ಬೆಳೆಸಿದ ಸಂಸ್ಥೆಯನ್ನು ಚಿರ ಕಾಲ ಉಳಿಯುವಂತೆ ಮಾಡಲು ಸಾಧ್ಯವಾಗುತ್ತದೆ ಎಂದರು.
೫೦,೬೦ರ ದಶಕ ಶಿಕ್ಷಣದ ಕ್ರಾಂತಿ ಮಾಡಿದ ದಿನಗಳು. ದುರ್ಗಮ ವಾದ, ಗುಡ್ಡಗಾಡಿನ ಪ್ರದೇಶಗಳಲ್ಲಿಯೂ ಪ್ರೌಢಶಾಲೆಗಳು ಆರಂಭವಾದಂತ ದಿನಗಳವು. ಇಂದಿನ ದಿನದಲ್ಲಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿ ಉತ್ತಮವಾಗಿ ಇರಲು ಬಿಡುತ್ತಿಲ್ಲ. ಜನರನ್ನು ಎಲ್ಲಿ ಸರಿಯಾಗಿ ಕಾರ್ಯಮಾಡಲು ಇಡಲು ಬಿಡುತ್ತದೆಯೊ ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಸರಿಯಲ್ಲ.ಎಲ್ಲಿ ಗುಣಮಟ್ಟ, ಸ್ಪರ್ಧೆ ಇದೆಯೋ ಅಲ್ಲಿ ಉತ್ತಮ ಆಡಳಿತಕ್ಕೆ ಇರುವಂತೆ ಇರಲು ಸರಕಾರಗಳು ಬಿಡಲಿ. ಅಲ್ಲದೇ ವ್ಯವಸ್ಥೆಗಳನ್ನೆ ನೀಡಲಾಗದಿದ್ದರೆ ಪ್ರಾರಂಭವೇ ಬೇಡ ಎಂದರು.
ಈ ಮೊದಲು ಸಭಾ ಕಾರ್ಯಕ್ರಮವನ್ನೂ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ವಿಶ್ವೇಶ್ವರ ಭಟ್ “ಸಮಾಜವನ್ನು ತಿದ್ದಿದ, ಉತ್ತಮವಾದ ನಾಯಕರನ್ನು ಸಮಾಜಕ್ಕೆ ನೀಡಿದ ತಪೋಭೂಮಿ ಈ ಗೋಳಿ ಪ್ರೌಢಶಾಲೆಯಾಗಿದೆ. 37 ವರ್ಷಗಳ ಹಿಂದಿನ ವಿದ್ಯಾರ್ಥಿ ನಾನಾಗಿದ್ದೆ ಎನ್ನುವುದೇ ಹೆಮ್ಮೆ.ಗೋಳಿ ಹೈಸ್ಕೂಲಿನಲ್ಲಿ ನನ್ನ ಅಸ್ತಿತ್ವವಿದೆ. ನಾನು ಇಂದಿನ ಸ್ಥಿತಿಗೆ ಇದೇ ಶಾಲೆಯೇ ಕಾರಣ.ಪ್ರತಿಯೊಂದು ನನ್ನ ಆಲೋಚನೆಯಲ್ಲಿಯೂ ನೀವಿದ್ದೀರಿ.ನಾನೆಂದೂ ಹಣೆಗೆ ನಾಮಹಾಕಿಲ್ಲ. ಇಲ್ಲಿನ ಗುರುಗಳು ನನಗೆ ಕೆನ್ನೆಯ ಮೇಲೆ ನಾಮಹಾಕಿದ್ದಾರೆ ಎಂದು ಅಂದಿನ ದಿನಗಳನ್ನು ನೆನೆಪಿಸಿಕೊಂಡರು.
ಸುವರ್ಣ ಮಹೋತ್ಸವದ ಎರಡನೇ ದಿವಸದ ಕಾರ್ಯಕ್ರಮದ ಅಂಗವಾಗಿ ಮಾಜಿ ಅಧ್ಯಕ್ಷರಾದ ಕೇಶವ ಹೆಗಡೆ ಹಾಗೂ ಎಮ್.ವಿ.ಹೆಗಡೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ಸಂಸ್ಥೆಯ ಮಾಜಿ ವಿದ್ಯಾರ್ಥಿ ರವೀಂದ್ರ ಭಟ್ ಅವರುಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿಶ್ವಾನಾಥ ಶರ್ಮ ನಾಡ್ಗುಳಿ, ಸಂಸ್ಥೆಯ ಪ್ರಮುಖರಾದ ಎಮ್.ಎನ್.ಹೆಗಡೆ ಮುಂತಾದವರು ಇದ್ದರು.