ಕುಮಟಾ :ತಾಲೂಕಿನ ಮಾದನಗೇರಿಯ ಶಿವನಾಥ ಮಹಾಗಣಪತಿ ಮಂದಿರದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ 14 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್‍ಗಳ ಜೊತೆಗೆ ಟ್ರಸ್ಟ್ ವತಿಯಿಂದ ಉಚಿತ ಲೈಟರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 93 ನೇ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ ಅವರ ಸೇವೆಗಳನ್ನು ಸ್ಮರಿಸಿಕೊಂಡರು. ನಂತರ ಮಾತನಾಡಿ ಕಡುಬಡವರ ಮನೆಗಳಲ್ಲಿ ಕೂಡಾ ಎಲ್.ಪಿ.ಜಿ. ಗ್ಯಾಸ್ ಬಳಕೆಯಾಗಬೇಕು ಆ ಮೂಲಕ ಹೊಗೆಮುಕ್ತ ಮನೆ ನಿರ್ಮಾಣಗೊಂಡು ಉರುವಲುಗಳಿಂದ ಮಹಿಳೆಯರ ಸ್ವಾಸ್ಥ್ಯದ ಮೇಲೆ ಉಂಟಾಗುವ ದಿಷ್ಪರಿಣಾಮಗಳನ್ನು ತಪ್ಪಿಸುವ ಹಾಗೂ ಪರಿಸರ ನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಉಜ್ವಲ ಯೋಜನೆ
ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇಂತಹ ಜನಪರ ಯೋಜನೆಯನ್ನು ಬಡವರ
ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಡ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ ಅಲೆದಾಟವಿಲ್ಲದೇ ಸುಲಭವಾಗಿ ಅವರ ಮನೆಯಂಗಳದಲ್ಲಿ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿದ್ದೇವೆ. ಗ್ಯಾಸ್ ಕಿಟ್ ಗಳನ್ನು ಪಡೆದುಕೊಂಡ ಫಲಾನುಭವಿಗಳ ಸಂತಸ ಕಂಡಾಗ ನಮ್ಮ ಕೆಲಸ ಸಾರ್ಥಕ ಎನಿಸುತ್ತದೆ ಮತ್ತು ಇದರಿಂದ ನಮಗೆ ಆತ್ಮಸಂತ್ರಪ್ತಿ ದೊರೆಯುತ್ತಿದೆ. ಬಡವರ ಪರವಾದ ಈ ಯೋಜನೆಯ ಸೌಲಭ್ಯವನ್ನು ಬಡವರಿಗೇ ತಲುಪಿಸಬೇಕೆಂದು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಸರಕಾರ ಇಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲಿದ್ದು ಅವುಗಳನ್ನು ಸಹ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಸದಾ ಮುಂಚೂಣಿಯಲ್ಲಿರುತ್ತೇವೆ ಎಂದರು.
ರಾಜೇಶ ಮಹಾಲೆ, ಸುನೀಲ ಪೈ, ಸದಾನಂದ ನಾಯಕ ಅವರು ಮಾತನಾಡಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಸೌಲಭ್ಯವನ್ನು ಬಡ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಶತಪ್ರಯತ್ನ ನಡೆಸುತ್ತಿದೆ. ಇದರ ಫಲವಾಗಿ ಸುಲಭವಾಗಿ ಅವರ ಮನೆಯಂಗಳದಲ್ಲಿ ಗ್ಯಾಸ್ ಕಿಟ್ ಗಳನ್ನು ಪಡೆದುಕೊಳ್ಳುವಂತಾಗಿದೆ ಅಲ್ಲದೇ ತಮ್ಮ ಟ್ರಸ್ಟ್ ವತಿಯಿಂದಲೇ ಎಲ್ಲಾ ಫಲಾನುಭವಿಗಳಿಗೂ ಉಚಿತ ಲೈಟರಗಳನ್ನು ವಿತರಿಸುತ್ತಿರುವ
ನಾಗರಾಜ ನಾಯಕ ತೊರ್ಕೆಯವರ ಕಾರ್ಯ ಶ್ಲಾಘನೀಯ ಹಾಗೂ ಇತರರಿಗೆ ಮಾದರಿಯಾಗಿದೆ ಎಂದರು.
ಫಲಾನುಭವಿಗಳಾದ ಗೀತಾ ಗೋವಿಂದ ಪಟಗಾರ, ತುಳಸಿ ಹೊನ್ನಪ್ಪ ಗೌಡ, ಗೀತಾ ಲೋಕಪ್ಪ ಗೌಡ, ಲಲಿತಾ ರಾಮಚಂದ್ರ ಹರಿಕಂತ್ರ, ನೀಲಾ ಬುದ್ದು ಹರಿಕಂತ್ರ, ನಾಗವೇಣಿ ಅಶೋಕ ಹರಿಕಂತ್ರ, ನಂದಿತಾ ನಾಗರಾಜ ಪೈ, ನಾಗಿ ಸುಕ್ರಪ್ಪ ಗೌಡ, ನೀಲಮ್ಮ ಜಟ್ಟು ಗೌಡ, ಗಂಗೆ ಹಮ್ಮು ಗೌಡ, ಸಮ್ಮತಿ ವಿಠೋಬ ಗೌಡ ಇವರಿಗೆ ಗ್ಯಾಸ್ ಕಿಟ್‍ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ರಮೇಶ ನಾಯಕ, ವೆಂಕಟ್ರಮಣ ಕವರಿ, ಸದಾನಂದ ನಾಯ್ಕ ಹೊಸ್ಕಟ್ಟ, ದತ್ತಾ ನಾಯ್ಕ ಸಾಣೆಕಟ್ಟ, ಬೀರಾ ವಿಠೋಬ ಗೌಡ, ಮಧುಕರ ಅಗಸಾಲಿ, ಮಧುಕರ ಡಿ. ಮಹಾಲೆ ಮುಂತಾದವರು ಉಪಸ್ಥಿತರಿದ್ದರು. ಅರುಣ ಕವರಿ ಸ್ವಾಗತಿಸಿದರು.