ಕಾರವಾರ: ಬೆಂಗಳೂರಿನಲ್ಲಿ ಸೇರಿದಂತೆ ಇತರ ಜಿಲ್ಲೆಯಲ್ಲೂ ಯಶಸ್ವಿಯಾಗಿರುವ ಇಂದಿರಾ ಕ್ಯಾಂಟಿನ್‍ನನ್ನು ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದ್ದು ಜಿಲ್ಲೆಯ 11 ಕಡೆಗಳಲ್ಲಿ ಕ್ಯಾಂಟಿನ್ ಆರಂಭಕ್ಕೆ ಸಿದ್ದತೆ ನಡೆಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟಿನ್ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಜನರ ಮೆಚ್ಚುಗೆ ಪಾತ್ರವಾದ ಬೆನ್ನಲ್ಲೆ ರಾಜ್ಯದ ಎಲ್ಲ ಭಾಗಗಳಲ್ಲಿ ಕ್ಯಾಂಟಿನ್ ತೆರಯಲು ಸಿದ್ದತೆ ಆರಂಭಗೊಂಡಿದೆ. ಅದರಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಈಗಾಗಲೇ 3 ನಗರಸಭೆ ಪುರಸಭೆ ಹಾಗೂ 4 ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಯಾಂಟಿನ್ ಆರಂಭಿಸಲು ಸ್ಥಳ ಗುರುತಿಸಲಾಗಿದ್ದು, ಯೋಜನೆಯಂತೆ ಎಲ್ಲವು ನಡೆದಲ್ಲಿ ನೂತನ ವರ್ಷಕ್ಕೆ ಜನರಿಗೆ ಕಡಿಮೆ ದರಲ್ಲಿ ಉಪಹಾರ ಹಾಗೂ ಮಧ್ಯಾಹ್ನದ ಊಟ ಲಭ್ಯವಾಗಲಿದೆ.

ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿರುವ 11 ಕ್ಯಾಂಟಿನ್ ಕಟ್ಟಡಗಳ ನಿರ್ಮಾಣದ ಜವಬ್ದಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‍ಐಡಿಎಲ್)ವಹಿಸಲಾಗಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಅವಶ್ಯವಿರುವ ಜಾಗವನ್ನು ನಗರಾಭಿವೃದ್ಧ ಕೋಶ ಹಸ್ತಾಂತರಿಸಿದೆ. ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿರುವ ಪ್ರತಿ ಕಟ್ಟಡಕ್ಕೆ ತಲಾ ರು.53 ಲಕ್ಷದಂತೆ ರು.5.83 ಕೋಟಿ ಒದಗಿಸಲಾಗಿದೆ. ಕೆಆರ್‍ಐಡಿಎಲ್ ಶೇ 11 ರ ನಿರ್ವಹಣಾ ವೆಚ್ಚ ರು. 64 ಲಕ್ಷ, ಉಪಕರಣಗಳ ಖರೀದಿಗೆ ತಲಾ ರು. 19 ಲಕ್ಷದಂತೆ ರು. 1.65 ಕೋಟಿ ಮೀಸಲಿರಿಸಲಾಗಿದೆ. ಒಟ್ಟಾರೆ ಜಿಲ್ಲೆಗೆ ರು. 8.61 ಕೋಟಿ ಬಿಡುಗಡೆ ಮಾಡಲಾಗಿದೆ. ಸದ್ಯ ಟೆಂಡರ್ ಪ್ರಕ್ರಿಯೇ ಚಾಲ್ತಿಯಲ್ಲಿದ್ದು, ಸುಸಜ್ಜಿತ ಕಟ್ಟಡ ಹಾಗೂ ಸಕಲ ಸೌಲಭ್ಯಗಳೊಂದಿಗೆ ಇನ್ನೊಂದು ತಿಂಗಳಿನಲ್ಲಿ ಉದ್ಘಾಟನೆಗೆ ಸಿದ್ದಗೊಳಿಸಬೇಕಾದ ಜವಬ್ದಾರಿ ಇದೀಗ ಅಧಿಕಾರಿಗಳ ಹೆಗಲಿಗೇರಿದೆ.

RELATED ARTICLES  ಅವಧಿ ಮುಗಿದ ತಾಲ್ಲೂಕು ಪಂಚಾಯ್ತಿ ಕ್ಯಾಂಟೀನ್‌ ತೆರವು

ಜಿಲ್ಲೆಯಲ್ಲಿ ಒಟ್ಟು 11 ಕಡೆಗಳಲ್ಲಿ ಕ್ಯಾಂಟಿನ್ ಆರಂಭಿಸಲು ಸಿದ್ದತೆ ನಡೆದಿದ್ದು, ಕಾರವಾರದಲ್ಲಿ ಹಿಂದು ಹೈಸ್ಕೂಲ್ ಬಳಿ, ಭಟ್ಕಳ ಬಂದರು ರಸ್ತೆಯ ವಲ್ಲಭಬಾಯಿ ಪಟೇಲ್ ಗಾರ್ಡನ್ ಎದುರು, ಶಿರಸಿಯಲ್ಲಿ ದೇವಿಕೇರೆ ಭೂತಪ್ಪನ ಕಟ್ಟೆ ಸಮೀಪ, ದಾಂಡೇಲಿಯಲ್ಲಿ ಜೆ.ಎನ್.ರಸ್ತೆಯ ಕೆನರಾ ಬ್ಯಾಂಕ್ ಎದುರು, ಕುಮಟಾದ ಹಳೆ ಮೀನು ಮಾರುಕಟ್ಟೆ ಸಮೀಪ, ಅಂಕೋಲಾ ಸರ್ಕಾರಿ ಆಸ್ಪತ್ರೆಯ ಸಮೀಪ, ಹಳಿಯಾಳದ ಮಾರುತಿಗಲ್ಲಿ ಸಮೀಪ, ಹೊನ್ನಾವರ ಬಸ್ ನಿಲ್ದಾಣದ ಸಮೀಪದ ಪಿಡಬ್ಲ್ಯುಡಿ ಖಾಲಿ ಜಾಗದಲ್ಲಿ, ಮುಂಡಗೋಡಿನ ಹುಬ್ಬಳ್ಳಿ-ಶಿರಸಿ ಮುಖ್ಯ ರಸ್ತೆಯ ಪಕ್ಕ ಖಾಲಿ ಸರಕಾರಿ ಜಾಗದಲ್ಲಿ, ಸಿದ್ದಾಪುರ ಕೊಂಡ್ಲಿಯಲ್ಲಿ, ಯಲ್ಲಾಪುರ ಪಟ್ಟಣ ಪಂಚಾಯಿತಿ ಕಚೇರಿಯ ಎದುರು ಸ್ಥಳ ಗುರುತಿಸಲಾಗಿದೆ.
ಕ್ಯಾಂಟೀನ್‍ನಲ್ಲಿ ರು. 5ಕ್ಕೆ ಬೆಳಗಿನ ಉಪಾಹಾರ ರು. 10 ಕ್ಕೆ ಮಧ್ಯಾಹ್ನದ ಊಟ ಲಭ್ಯವಾಗಲಿದೆ. ಆಹಾರ ಪೂರೈಕೆಯ ಶೇ 30ರಷ್ಟು ಸಹಾಯಧನವನ್ನು ಕಾರ್ಮಿಕ ಕಲ್ಯಾಣ ಇಲಾಖೆಯ ಕಾರ್ಮಿಕರ ಸೆಸ್‍ನಿಂದ ಪಡೆಯಬೇಕಿದೆ. ಉಳಿದ ಶೇ 70ರಷ್ಟನ್ನು ನಗರಾಭಿವೃದ್ಧಿ ಇಲಾಖೆಯಿಂದ ಒದಗಿಸಲಾಗುವುದು. ಕ್ಯಾಂಟೀನ್ ಮೇಲ್ವಿಚಾರಣೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 10 ಅಧಿಕಾರಿಗಳ ಸಮಿತಿ ನೇಮಿಸಲಾಗಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಅದರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ನಾಯ್ಕ ಎಂದು ತಿಳಿಸಿದರು.

RELATED ARTICLES  ಹೊನ್ನಾವರ ಶರಾವತಿ ನದಿಯಲ್ಲಿ ತೇಲಿ ಬಂದ ಮಹಿಳೆಯ ಶವ: ಕೆಲಕಾಲ ಗೊಂದಲ

ಜನಸಂಖ್ಯೆ ಆಧಾರದ ಮೇಲೆ ಕ್ಯಾಂಟಿನನಲ್ಲಿ ಪ್ರತಿ ಹೊತ್ತಿಗೆ ಇಂತಿಷ್ಟು ಜನರಿಗೆ ನೀಡಬೇಕು ಎಂದು ಮಿತಿ ಹೇರಲಾಗಿದೆ. ಅದರಂತೆ ಜಿಲ್ಲೆಯಲ್ಲಿ 25 ಸಾವಿರದವರೆಗೆ ಇರುವ ಹೊನ್ನಾವರ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರಗಳಲ್ಲಿ 200 ಮಂದಿಗೆ ಒಂದು ಹೊತ್ತಿನ ಆಹಾರ ನೀಡಲಾಗುತ್ತದೆ. 25 ಸಾವಿರದಿಂದ 45 ಸಾವಿರ ಜನಸಂಖ್ಯೆ ಹೊಂದಿರುವ ಹಳಿಯಾಳ, ಕುಮಟಾ, ಭಟ್ಕಳ, ಅಂಕೋಲಾದಲ್ಲಿ 300 ಜನರಿಗೆ ಮತ್ತು 45 ಸಾವಿರದಿಂದ 1 ಲಕ್ಷವರೆಗೆ ಜನಸಂಖ್ಯೆ ಹೊಂದಿರುವ ಕಾರವಾರ, ಶಿರಸಿ, ದಾಂಡೇಲಿಗಳಲ್ಲಿ ಹೊತ್ತಿಗೆ 500 ಜನರಿಗೆ ಆಹಾರ ದೊರೆಯಲಿದೆ.

ಕ್ಯಾಂಟೀನ್ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಗುರುತಿಸಿದ್ದು, ಕೆಆರ್‍ಐಡಿಎಲ್ ಸಂಸ್ಥೆಗೆ ಅದನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಅಲ್ಲದೇ ಕ್ಯಾಂಟಿನ್ ನಡೆಸಲು ಟೆಂಡರ್ ಕರೆಯಲಾಗಿದೆ. ಎಂದು ಆರ್.ಪಿ.ನಾಯ್ಕ ತಿಳಿಸಿದರು.