ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಕುಲಭೂಷಣ್ ಜಾಧವ್ ಭೇಟಿಗೂ ಮುನ್ನ ಅವರ ತಾಯಿ ಅವಂತಿ ಮತ್ತು ಪತ್ನಿ ಚೇತನ್ ಕುಲ್ ಧರಿಸಿದ್ದ ಉಡುಪುಗಳನ್ನು ಬಲವಂತದಿಂದ ಬದಲಾಯಿಸುವಂತೆ ಮಾಡಲಾಗಿತ್ತು ಎಂದು ಭಾರತ ಮಂಗಳವಾರ ಆರೋಪಿಸಿದೆ.
‘ಭದ್ರತೆಯ ನೆಪದಲ್ಲಿ ಇಬ್ಬರ ಮಂಗಳಸೂತ್ರ, ಬಳೆಗಳು ಮತ್ತು ಕುಂಕುಮ ತೆಗೆಸಲಾಗಿತ್ತು. ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ’ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೂರಿದೆ.
‘ಜಾಧವ್ ಕುಟುಂಬದ ಮಾತೃಭಾಷೆ ಮರಾಠಿ. ಆದರೆ, ಅವಂತಿ ಅವರು ತಮ್ಮ ಮಗನೊಂದಿಗೆ ಮರಾಠಿಯಲ್ಲಿ ಮಾತನಾಡುವುದಕ್ಕೆ ಪದೇ ಪದೇ ಅಡ್ಡಿಪಡಿಸಲಾಯಿತು’ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಆರೋಪಿಸಿದ್ದಾರೆ.
ಜಾಧವ್ ಪತ್ನಿ ಚೇತನ್ ಕುಲ್ ಧರಿಸಿದ್ದ ಶೂಗಳನ್ನು ವಾಪಸ್ ನೀಡಲಿಲ್ಲ. ಇದಕ್ಕೆ ಏನು ಕಾರಣ ಎಂಬುದನ್ನೂ ಪಾಕಿಸ್ತಾನ ಹೇಳಿಲ್ಲ ಎಂದು ಅವರು ಹೇಳಿದ್ದಾರೆ.