ಬೆಳಗಾವಿ: ಉತ್ತರ ಕರ್ನಾಟಕದ ಭಾಗದ ದಶಕಗಳ ಬೇಡಿಕೆ ಕುಡಿಯುವ ಸಲುವಾಗಿ ಮಹದಾಯಿ ನೀರು ಹಂಚಿಕೆ ವಿವಾದ ಸಂಬಂಧ ರೈತರು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಮಹದಾಯಿ ವಿವಾದದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸ ಬೇಕು ಎಂದು ಆಗ್ರಹಿಸಿ ಕಳಸಾ – ಬಂಡೂರಿ ಹೋರಾಟಗಾರರು ನಡೆಸುತ್ತೀರುವ ಉತ್ತರ ಕರ್ನಾಟಕ ಬಂದ್ ಬೆಳಗ್ಗೆಯಿಂದಲೇ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನೂರಾರು ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ರಸ್ತೆಗಿಳಿದು ಕೇಂದ್ರ, ಗೋವಾ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರಮುಖವಾಗಿ ಬೆಳಗಾವಿ, ನವಲಗುಂದ, ಹುಬ್ಬಳ್ಳಿ, ನರಗುಂದ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು ಏಳು ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಈ ಏಳು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕರ್ನಾಟಕ ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತ್ತರ 3ನೇ ಸೆಮೆಸ್ಟರ್ ಪರೀಕ್ಷೆ ಮುಂದೂಡಲಾಗಿದೆ. ಡಿ.27ರಂದು ನಡೆಯಿಬೇಕಿದ್ದ ಪರೀಕ್ಷೆಯನ್ನು ಜ.7ಕ್ಕೆ ಮುಂದೂಡಿದೆ ಎಂದು ವರದಿಯಾಗಿದೆ.