ವಾಷಿಂಗ್ಟನ್: ಎರಡು ದಶಕಗಳಿಗೂ ಅಧಿಕ ಕಾಲದಿಂದ ಸಂಗ್ರಹಿಸಲ್ಪಟ್ಟಿದ್ದ ಮಾನವ ಭ್ರೂಣದಿಂದ ಅಮೆರಿಕಾದ ಮಹಿಳೆಯೊಬ್ಬರು ಮಗುವನ್ನು ಪಡೆದಿದ್ದಾರೆ.ಭ್ರೂಣವನ್ನು ಇವರು ದಾನ ಪಡೆದಿದ್ದರು.
1992ರ ಅಕ್ಟೋಬರ್ 14ರಂದು ಶೇಖರಿಸಲ್ಪಟ್ಟಿದ್ದ ಭ್ರೂಣದಿಂದ ಅಮೆರಿಕಾದ ಪೂರ್ವ ಟೆನ್ನೆಸ್ಸೀಯಲ್ಲಿ ಟಿನಾ ಗಿಬ್ಸನ್ ಎಂಬ ಮಹಿಳೆ ಕಳೆದ ನವೆಂಬರ್ 25ರಂದು ಮಗುವನ್ನು ಹಡೆದಿದ್ದಾರೆ.
ಹೆಪ್ಪುಗಟ್ಟಿದ ಭ್ರೂಣ ಕಳೆದ ಮಾರ್ಚ್ ತಿಂಗಳಲ್ಲಿ ಕರಗಲಾರಂಭಿಸಿತು. ನಂತರ ಪ್ರನಾಳೀಯ ಫಲೀಕರಣ ಮೂಲಕ ಟೀನಾಗೆ ವರ್ಗಾಯಿಸಲಾಯಿತು. ಹೆಪ್ಪುಗಟ್ಟಿದ ಭ್ರೂಣದ ವಯಸ್ಸು ಕೇಳಿ ದಂಪತಿಗೆ ಆರಂಭದಲ್ಲಿ ಅಚ್ಚರಿಯಾಯಿತು, ನಂತರ ಒಪ್ಪಿಕೊಂಡು ಪಡೆದರು.
26 ವರ್ಷದ ಟೀನಾ ಗಿಬ್ಸನ್ ಗೆ ಭ್ರೂಣವನ್ನು ದಾನ ಪಡೆದು ಮಗುವಾದ ಬಗ್ಗೆ ಖುಷಿಯಿದೆ. ನನಗೆ ಮಗುವಾಗಬೇಕೆಂದು ಆಸೆಯಿತ್ತು. ಇದು ವಿಶ್ವ ದಾಖಲೆ ಮಾಡಿದೆಯೋ, ಇಲ್ಲವೊ ಎಂದು ನಾನು ಯೋಚಿಸಲು ಹೋಗುವುದಿಲ್ಲ ಎನ್ನುತ್ತಾರೆ.
1991ರಲ್ಲಿ ಜನಿಸಿದ ಟೀನಾಗೆ ತನ್ನ ಪತಿ ಬೆಂಜಮಿನ್ ನಿಂದ ಸಹಜವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಕೆಯ ಪತಿಗೆ ಸಿಸ್ಟಿಕ್ ಫೈಬ್ರೋಸಿಸ್ ಸಮಸ್ಯೆಯಿದ್ದು, ಅಂತಹ ಸಮಸ್ಯೆಯಿರುವ ಶೇಕಡಾ 98 ಮಂದಿಗೆ ಬಂಜೆತನದ ಸಮಸ್ಯೆಯಿರುತ್ತದೆ.
ಇಂತಹ ಸಮಯದಲ್ಲಿ ದಂಪತಿ ಬಾಳಲ್ಲಿ ಆಶಾಕಿರಣವಾಗಿ ಮೂಡಿದ್ದು ಭ್ರೂಣ. ಮಗುವಿಗೆ ಎಲ್ಲಾ ರೆನ್ ಎಂದು ಹೆಸರನ್ನು ಇಟ್ಟಿದ್ದಾರೆ.