ಹೌಸ್ಟನ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಿತ್ಯ ಪೋಸ್ಟ್ ಗಳನ್ನು ಹಾಕಿ, ಅದಕ್ಕೆ ವೋಟ್ ಮಾಡಿ, ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಂದು ವಿನಂತಿಸಿಕೊಳ್ಳುವ ತಂತ್ರಕ್ಕೆ ಕಡಿವಾಣ ಹಾಕಲು ಫೇಸ್ ಬುಕ್ ಮುಂದಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.
ಲೈಕ್ ಮಾಡಲು ಹಾಗು ಶೇರ್ ಮಾಡಲು ವಿನಂತಿಸುವ ಹಿಂದೆ ಪೋಸ್ಟ್ ರೀಚನ್ನು ಹೆಚ್ಚಿಸುವ ತಂತ್ರವಿದೆ. ಇದೀಗ ಈ ತಂತ್ರಕ್ಕೆ ಕಡಿವಾಣ ಹಾಕಲು ಫೇಸ್ ಬುಕ್ ನಿರ್ಧರಿಸಿದೆ. ಪೋಸ್ಟ್ ರೀಚ್ ಅಂದರೆ ಪೋಸ್ಟ್ ತಲುಪುವ ಸಂಖ್ಯೆ. ಪೋಸ್ಟ್ ರೀಚನ್ನು ಹೆಚ್ಚಿಸಲು ವಿನಂತಿಯ ತಂತ್ರದ ಮೊರೆ ಹೋಗುವ ಪೇಜ್ ಅಡ್ಮಿನ್ ಗಳಿಗೆ ಕಡಿವಾಣ ಹಾಕಲಾಗುವುದು ಎಂದು ಫೇಸ್ ಬುಕ್ ತಿಳಿಸಿದೆ.
ವಿನಂತಿಯ ಮೂಲಕ ತಮ್ಮ ಪೋಸ್ಟ್ ಗಳ ರೀಚ್ ಹೆಚ್ಚಿಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿನಂತಿಯ ತಂತ್ರಕ್ಕೆ ಮೊರೆ ಹೋಗುವವರನ್ನು ಗುರುತಿಸಿ ಅವರ ಪೇಜ್ ನಲ್ಲಿನ ಪೋಸ್ಟ್ ಗಳ ರೀಚನ್ನು ಕಡಿಮೆಗೊಳಿಸಲಾಗುವುದು ಎಂದು ಫೇಸ್ ಬುಕ್ ಹೇಳಿದೆ.
ಆದಾಗ್ಯೂ, ಉತ್ತಮ ಸ್ವಭಾವದ ಮೂಲಕ ಕಳೆದುಕೊಂಡ ಫೇಸ್ ಬುಕ್ ರೀಚ್ ಅನ್ನು ಮರಳಿ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಮತ್ತು ಉತ್ತಮ ಉದ್ದೇಶಕ್ಕಾಗಿ ಹಣ ಸಂಗ್ರಹದಂತಹ ಪೋಸ್ಟ್ ಗಳನ್ನು ಶೇರ್ ಮಾಡಲು ವಿನಂತಿಸಿದರೆ ಅಂತಹ ಪೋಸ್ಟ್ ಗಳಿಗೆ ದಂಡದಿಂದ ವಿನಾಯ್ತಿ ನೀಡಲಿದೆ ಎನ್ನಲಾಗಿದೆ.