ಕಾಸರಗೋಡು-ಹಳೆಗನ್ನಡ ಛಂದಸ್ಸುಗಳಾದ ಕಂದ, ವೃತ್ತಗಳಲ್ಲಿ ಇತ್ತೀಚೆಗೆ ಯಾರೂ ಸಾಹಿತ್ಯ ರಚನೆ ಮಾಡುತ್ತಿಲ್ಲ. ಹಳೆ ಸಾಹಿತ್ಯ ಸಂಪತ್ತನ್ನು ಮೂಲೆಗುಂಪಾಗಲು ಬಿಡದೆ; ಅದರಲ್ಲಿ ವ್ಯವಸಾಯಮಾಡಿ, ರಕ್ಷಿಸಿ ಪೋಷಿಸಿಕೊಂಡುಬರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕವು ಹಮ್ಮಿಕೊಂಡ ಹಳೆಗನ್ನಡ ಸಾಹಿತ್ಯ ರಚನಾ ತರಬೇತಿ ಶಿಬಿರವು ಫಲಪ್ರದವಾಗಲಿ. ಎಂದು ವೇದಿಕೆಯ ಅಧ್ಯಕ್ಷರಾದ ವಿ.ಬಿ.ಕುಳಮರ್ವ ಅಭಿಪ್ರಾಯ ಪಟ್ಟರು.
ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರಭಟ್ ವೇದಿಕೆಯಲ್ಲಿ ಸಿರಿಗನ್ನಡ ವೇದಿಕೆಯ ವತಿಯಿಂದ ವ್ಯವಸ್ಥೆಗೊಳಿಸಿದ ಈ ವರ್ಷದ ಎಂಭತ್ತೆಂಟನೆ ಕಾರ್ಯವಾಗಿ ಒಂದು ದಿನದ ಉಚಿತ ಹಳೆಗನ್ನಡ ಸಾಹಿತ್ಯರಚನಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗಮಕ ಕಲಾಪರಿಷತ್ತಿನ ಅಧ್ಯಕ್ಷ ತೆಕ್ಕೆಕರೆ ಶಂಕರನಾರಾಯಣಭಟ್ಟರು ಉದ್ಘಾಟಿಸಿ ಸೇರಿದ ಶಿಬಿರಾರ್ಥಿಗಳಲ್ಲಿ ಇದರ ಸಂಪೂರ್ಣಪ್ರಯೋಜನ ಪಡೆದುಕೊಳ್ಳಬೇಕೆಂದು ಸೂಚನೆಯಿತ್ತರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸಾಹಿತಿ, ಕವಿ, ಕುಳಮರ್ವ ಇವರು ಕಂದಪದ್ಯ ಭಾಮಿನಿಷಟ್ಪದಿ ಮೊದಲಾದ ಛಂದೋ ವಿಭಾಗಗಳಲ್ಲಿ ಸುಲಲಿತವಾಗಿ ಕವನ ರಚನೆಯ ವಿಧಾನವನ್ನು ಸೋದಾಹರಣೆಯೊಂದಿಗೆ ಆಶುಕವನವನ್ನು ರಚನೆಮಾಡಿ ತರಬೇತಿಯನ್ನಿತ್ತರು.
ಕಾಸರಗೋಡು ಸರಕಾರಿ ಕಾಲೇಜಿನ ದ್ವಿತೀಯ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪದವಿ ವಿದ್ಯಾರ್ಥಿಗಳಲ್ಲದೆ ಕೆಲವು ಜನ ಹಿರಿಯರೂ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಗಮಕ ಕಲಾಧರೆ ಶ್ರದ್ಧಾ ಭಟ್ ಪ್ರಾರ್ಥನೆಗೈದರು. ಸಿರಿಗನ್ನಡ ವೇದಿಕೆ ಕಾಸರಗೋಡು ಘಟಕದ ಮಹಿಳಾಧ್ಯಕ್ಷೆ ವಿಜಯಾಸುಬ್ರಹ್ಮಣ್ಯ ಕುಂಬಳೆ ಸ್ವಾಗತವಿತ್ತರು.
ಶಿಬಿರದ ಪ್ರಾಯೋಜಕಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳನ್ನು ಸರಣಿ ಕಾರ್ಯಕ್ರಮವಾಗಿಹಮ್ಮಿಕೊಳ್ಳುವ ಯೋಜನೆಯನ್ನು ತಳಿಸಿದರು.
ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣಭಟ್, ಏತಡ್ಕ ನರಸಿಂಹ ಭಟ್, ಕಲ್ಲಕಟ್ಟಶಾಲಾ ಮುಖ್ಯಶಿಕ್ಷಕ ಶ್ಯಾಮಪ್ರಸಾದ ಕುಳಮರ್ವ, ನಿವೃತ್ತ ಸಂಸ್ಕೃತ ಶಿಕ್ಷಕ ಡಾ.ಸದಾಶಿವಭಟ್, ಮೊದಲಾದವರು ಶುಭಾಶಂಸನೆಗೈದರು. ಶಿಬಿರಾರ್ಥಿಗಳು ಕಂದಪದ್ಯ ಹಾಗೂ ಷಟ್ಪದಿಗಳಲ್ಲಿ ತಮ್ಮ ಸ್ವರಚನೆ ಮಂಡಿಸಿದರು. ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ .ಬಿ ವಂದನಾರ್ಪಣೆಗೈದರು.
ವರದಿ – ವಿಜಯಾಸುಬ್ರಹ್ಮಣ್ಯ ಕುಂಬಳೆ.