ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಸಂಸದರು ಕೇಂದ್ರ ಸಚಿವರಾದಾಗ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ನಿರೀಕ್ಷಿಸಿದ್ದೆವು. ಆದರೆ ಈಗಿನ ಅವರ ನಡುವಳಿಕೆ ನೋಡಿದಲ್ಲಿ ಜಿಲ್ಲೆಗೆ ಇದೊಂದು ಕಪ್ಪು ಚುಕ್ಕೆ ಎನಿಸುವಂತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವರು ನೀಡುತ್ತಿರುವ ಮುಖ್ಯಮಂತ್ರಿಗಳ ವಿರುದ್ಧ, ಸಂವಿಧಾನದ ವಿರುದ್ಧ, ಜ್ಯಾತ್ಯಾತೀತತೆಯ ವಿರುದ್ಧದ ಹೇಳಿಕೆಗಳು ಜಿಲ್ಲೆಯ ಜನರಿಗೆ ಮುಜುಗರ ತರುವಂತಿದೆ. ಉತ್ತರ ಕನ್ನಡಂತಹ ಉತ್ತಮ ಜಿಲ್ಲೆಯ ಮಗನಾಗಿ ಸಚಿವರು ಇಂತಹ ಹೇಳಿಕೆ ನೀಡಿರುವುದು ಅವರಿಗೆ ಶ್ರೇಷ್ಠತೆ ತರುವುದಿಲ್ಲ. ಅವರ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂದರು.
ಇತ್ತೀಚಿನ ದಿನಗಳಲ್ಲಿ ಚುನಾವಣೆ ಗೆಲ್ಲಲು ಗಲಾಟೆಗಳು ಆಗುತ್ತಿರುವುದು ನೋವಿನ ಸಂಗತಿಯಾಗಿದೆ. ಇಲ್ಲಿ ಜ್ಯಾತ್ಯಾತೀತತೆಯ ವಿಷ ಬೀಜ ಬಿತ್ತುವ ಕೆಲಸ ಯಾರಿಂದಲೂ ಆಗಬಾರದು. ನಮ್ಮ ಜಿಲ್ಲೆಯಲ್ಲಿ ಯಾವಾಗಲೂ ಶಾಂತಿ ನೆಲೆಸಬೇಕು. ಎಲ್ಲರೂ ಕೂಡಿ ಬಾಳಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಭಾಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ್, ಕೆಪಿಸಿಸಿ ಕಾರ್ಯದರ್ಶಿ ವಿ.ಎಸ್.ಆರಾಧ್ಯ ಹಾಗೂ ಪ್ರಮುಖರಾದ ಸುಮಾ ಉಗ್ರಾಣಕರ ಮುಂತಾದವರು ಇದ್ದರು.