ಗ್ರಾಮೀಣ ಸೇವೆ ಕಡ್ಡಾಯ ಮೀಸಲಾತಿಯಡಿ ವೈದ್ಯಕೀಯ ಸೀಟ್ ಪಡೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದ ರಾಜ್ಯದ ಸುಮಾರು 700 ವೈದ್ಯರಿಗೆ ಶೀಘ್ರದಲ್ಲಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ನಿರಾಕರಿಸುತ್ತಿರುವ ವೈದ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದ್ದು, ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮೊದಲ ಪಟ್ಟಿ ಸಿದ್ಧಪಡಿಸಲಾಗಿದೆ.
ಕಡ್ಡಾಯ ಗ್ರಾಮೀಣ ಸೇವೆ ನಿಯಮ ಉಲ್ಲಂಘಿಸಿದ ವೈದ್ಯರಿಗೆ ಕಾರಣ ಕೇಳಿ ಶೀಘ್ರದಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 26ರಂದು ಆರೋಗ್ಯ ಸಚಿವ ಕೆ.ಆರ್ ರಮೇಶ್ ಕುಮಾರ್ ಗ್ರಾಮೀಣ ಸೇವೆ ಪೂರೈಸದ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಲಾಖೆ ಈಗ ಕ್ರಮಕ್ಕೆ ಮುಂದಾಗಿದೆ.