ಕಾರವಾರ: ಪ್ರಯಾಣಿಕರ ಸ್ನೇಹಿ ಆಟೋ ಸೇವೆಯನ್ನು ಒದಗಿಸಲು ಗೋಕರ್ಣ, ಮುರ್ಡೇಶ್ವರದಂತಹ ಪ್ರವಾಸಿ ಸ್ಥಳಗಳಲ್ಲಿರುವ ಅಟೋ ನಿಲ್ದಾಣಗಳಲ್ಲಿ ಪ್ರಯಾಣ ದರಗಳ ಫಲಕವನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ ಗೋಕರ್ಣ ಸೇರಿದಂತೆ ಕೆಲವು ಕಡೆಗಳಲ್ಲಿ ಕೆಲವು ರಿಕ್ಷಾ ಚಾಲಕರು ಹೆಚ್ಚಿನ ದರವನ್ನು ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಮತ್ತು ಆರ್.ಟಿ.ಒ ದವರು ಒಂದು ಸಾಮಾನ್ಯ ದರಪಟ್ಟಿ ಸಿದ್ದಪಡಿಸಿ ಆಟೋ ನಿಲ್ದಾಣಗಳಲ್ಲಿ ದರಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಆಟೋರಿಕ್ಷಾ ಕನಿಷ್ಠ ದರ 25: ಶಿರಸಿ ನಗರ ಆಟೋರಿಕ್ಷಾ ಚಾಲಕ-ಮಾಲೀಕರ ಸಂಘದವರು ನಗರ ಪ್ರದೇಶದಲ್ಲಿ ಆಟೋರಿಕ್ಷಾ ಈಗಿರುವ ಕನಿಷ್ಠ 20 ರೂ ದರವನ್ನು 30 ರೂ ಗೆ ಹೆಚ್ಚಿಸಲು ಸಲ್ಲಿಸಿದ್ದ ಅರ್ಜಿಗೆ ಸಂ¨ಂಧಿಸಿದಂತೆ ಎಲ್ಲಾ ನಗರ ಪ್ರದೇಶ ಮತ್ತು ಗೋಕರ್ಣದಲ್ಲಿ ಆಟೋರಿಕ್ಷಾ ಕನಿಷ್ಟ ದರವನ್ನು 25 ರೂ ಮಾತ್ರ ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಕಾನೂನು ರೀತಿ ವ್ಯಾಪಾರ ಮಾಡಲು ಅವಕಾಶವಿದೆ. ಜಿಲ್ಲೆಯ ಗೋಕರ್ಣದಲ್ಲಿ ಬಾಡಿಗೆ ಮೋಟಾರ ಸೈಕಲ್‍ಗೆ ಅನುಮತಿ ನೀಡಬಾರದು ಎಂದು ಜಿಲ್ಲಾ ಆಟೋ-ಚಾಲಕರ ಮಾಲಕರ ಸಂಘದವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಕಾನೂನು ರೀತಿ ವ್ಯಾಪಾರ ಮಾಡಲು ಅವಕಾಶವಿದೆ. ಇಲ್ಲಿ ಬಾಡಿಗೆ ಆಟೋ ಅಥವಾ ಮೋಟಾರ ಸೈಕಲ್ ಅನ್ನುವದು ಮುಖ್ಯವಲ್ಲ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಮುಖ್ಯವಾಗಿದೆ ಎಂದು ಹೇಳಿದರು.
ಶಾಲಾ ವಾಹನ: ಶಾಲಾ ವಾಹನಗಳ ಕುರಿತಾಗಿ ಸುಪ್ರೀಂಕೋರ್ಟ್ ಈಗಾಗಲೇ ಸಮಗ್ರ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಈ ಕುರಿತು ಸರಿಯಾಗಿ ಇನ್ನೂ ಕ್ರಮ ಕೈಗೊಂಡಿಲ್ಲ. ಮಾರ್ಗಸೂಚಿ ಜಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು, ಶಾಲಾ ವಾಹನಗಳ ನಿರ್ವಹಣೆ, ಚಾಲಕರ ಮಾಹಿತಿ, ವಾಹನಗಳ ಸಂಖ್ಯೆ ಇತ್ಯಾದಿಗಳ ಕುರಿತು ವರದಿ ತರಸಿಕೊಳ್ಳಬೇಕೆಂದು ತಿ ಳಿಸಿದರು.