ಚೆನ್ನೈ: ಜೀವನೋಪಾಯಕ್ಕಾಗಿ ನಾನು ತಮಿಳು ಭಾಷೆ ಕಲಿತೆ… ಆದರೆ ಕನ್ನಡವೇ ನನ್ನ ಮಾತೃಭಾಷೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಶನಿವಾರ ಹೇಳಿದ್ದಾರೆ.
ಚೆನ್ನೈನ ರಾಘವೇಂದ್ರ ಮಂಟಪಂ ನಲ್ಲಿ ನಡೆಯುತ್ತಿರುವ ಅಭಿಮಾನಿಗಳ ಸಭೆ ಸತತ ಐದನೇ ದಿನವೂ ಮುಂದುವರೆದಿದ್ದು, ಇಂದು ಅಭಿಮಾನಿಗಳ ಉದ್ದೇಶಿಸಿ ಮಾತನಾಡಿದ ರಜನಿಕಾಂತ್ ತಮ್ಮ ಬಾಲ್ಯ ಮತ್ತು ಚಿತ್ರರಂಗದ ಆರಂಭಿಕ ದಿನಗಳನ್ನು ನೆನೆದರು. ಈ ವೇಳೆ ತಮ್ಮ ಬಾಲ್ಯ ಹಾಗೂ ಕುಟುಂಬದ ಕುರಿತು ಮಾತನಾಡಿದ ರಜನಿಕಾಂತ್, ಕರ್ನಾಟಕದಲ್ಲಿ ತಮ್ಮದು ಮಧ್ಯಮವರ್ಗಕ್ಕಿಂತ ಕೆಳಗಿರುವ ಬಡ ಕುಟುಂಬ. ಜೀವನ ನಿರ್ವಹಣೆಗಾಗಿ ಸರ್ಕಾರಿ ಬಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ನಾನು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ್ದು, ನನ್ನ ಕುಟುಂಬದವರೂ ಕೂಡ ಕನ್ನಡದಲ್ಲೇ ಮಾತನಾಡುತ್ತಾರೆ. ಅಲ್ಲದೆ ಇಂದಿಗೂ ತಾವು ತಮ್ಮ ಸಹೋದರರೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ರಜನಿ ಹೇಳಿದ್ದಾರೆ.
ಇದೇ ವೇಳೆ ತಮ್ಮ ಚಿತ್ರರಂಗ ಪ್ರವೇಶದ ಕುರಿತು ಮಾತನಾಡಿದ ರಜನಿಕಾಂತ್, ನನ್ನ ಟ್ಯಾಲೆಂಟ್ ಅನ್ನು ಮೊದಲಿಗೆ ಗುರುತಿಸಿದ್ದು ನನ್ನ ಸ್ನೇಹಿತ ರಾಜ್ ಬಹದ್ದೂರ್.. ಅಂದು ನಾವು ಬಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆತ ನನ್ನನ್ನು ನಾಟಕಗಳಿಗೆ ಕರೆದೊಯ್ಯುತ್ತಿದ್ದ. ಅತನಿಗೂ ಸಿನಿಮಾ ನಾಟಕಗಳೆಂದರೆ ಪಂಚಪ್ರಾಣ. ಇಬ್ಬರೂ ಒಟ್ಟಿಗೆ ನಾಟಕ ಕೂಡ ಮಾಡಿದ್ದೆವು. ನನ್ನ ಪ್ರತಿಭೆ ಗುರುತಿಸಿದ್ದ ಆತ ಒಂದು ನಾಟಕದಲ್ಲಿ ನನಗೆ ಧುರ್ಯೋಧನನ ಪಾತ್ರ ನೀಡಿ ಆತ ಭೀಷ್ಮನ ಪಾತ್ರ ಮಾಡಿದ್ದ. ಆತನ ಒತ್ತಾಯದಿಂದಲೇ ನಾನು ಮದ್ರಾಸ್ ಸೇರಿದ್ದು. ನಾನು ಸಾಕಷ್ಚು ಕಾರ್ಯಕ್ರಮಗಳಲ್ಲಿ ನಿರ್ದೇಶಕ ಬಾಲಚಂದರ್ ಅವರ ಬಗ್ಗೆ ಹೇಳಿದ್ದೇನೆ. ಅದರೆ ಅವರ ಹೊರತು ನನ್ನ ಜೀವನ ಅಪೂರ್ಣ. ನಾನು ಮದ್ರಾಸ್ ಗೆ ಬಂದ ಹೊಸತರಲ್ಲಿ ಬಾಲಚಂದರ್ ಅವರನ್ನು ಭೇಟಿ ಮಾಡಿ ಸಿನಿಮಾದಲ್ಲಿ ನಟಿಸುವ ಕುರಿತು ಕೇಳಿದ್ದೆ. ಅಂದು ಅವರು ಯಾವುದಾದರೂ ನಟನೆ ಮಾಡಿ ತೋರಿಸು ಎಂದು ತಮಿಳಿನಲ್ಲಿ ಕೇಳಿದ್ದರು. ಆದರೆ ಅಂದು ನನಗೆ ತಮಿಳು ಬರುತ್ತಿರಲಿಲ್ಲ.
ನಾನು ಓದಿದ್ದು ಕಾರ್ಪೋರೇಷನ್ ಕನ್ನಡ ಮಾಧ್ಯಮ ಶಾಲೆಯಲ್ಲಿ.. ಹೀಗಾಗಿ ಕನ್ನಡ ಬರಲ್ಲ ಎಂದೇ.. ಇಂಗ್ಲೀಷ್ ನಲ್ಲಿ ಅಭಿನಯಿಸು ಎಂದು ಹೇಳಿದರು. ಇಂಗ್ಲೀಷಅ ಕೂಡ ಬರಲ್ಲ ಎಂದಾಗ ಸರಿ ನಿನಗೆ ಯಾವ ಭಾಷೆ ಬರುತ್ತದೋ ಅದೇ ಭಾಷೆಯಲ್ಲೇ ಅಭಿನಯ ಮಾಡು ಎಂದರು. ನಾನೂ ಕೂಡ ಅಭಿನಯಿಸಿ ತೋರಿಸಿದೆ. ಆಗ ಅವರು ನನ್ನನು ನೋಡಿ ಮೊದಲಿಗೆ ನಿನಗೆ ಪುಟ್ಟ ಪಾತ್ರ ನೀಡುತ್ತೇನೆ. ಬಳಿಕ ನನಗೊಂದು ಸಂಪೂರ್ಣ ಪ್ರಮಾಣ ಎಂಟ್ರಿ ಚಿತ್ರ ನೀಡುತ್ತೇನೆ ಎಂದು ಹೇಳಿ ಅಪೂರ್ವ ರಾಗಂಗಳ್ ಚಿತ್ರದಲ್ಲಿ ಪಾತ್ರ ನೀಡಿದರು. ಅವರು ಅಂದು ನೀಡಿದ ಬೆಂಬಲದಿಂದಾಗಿ ನಾನು ಇಂದು ಈ ರೀತಿ ನಿಮ್ಮ ಮುಂದೆ ನಿಂತಿದ್ದೇನೆ.
ಜೀವನೋಪಾಯಕ್ಕಾಗಿ ಅಂದು ತಮಿಳು ಕಲಿತೆ. ಇಂದು ಪರ್ಫೆಕ್ಟಾಗಿ ತಮಿಳು ಮಾತನಾಡುತ್ತೇನೆ, ಬರೆಯುತ್ತೇನೆ ಮತ್ತು ಅಭಿನಯಿಸುತ್ತೇನೆ ಎಂದು ರಜನಿಕಾಂತ್ ಹೇಳಿದರು. ಅಂತೆಯೇ ತಮ್ಮ ಆರೋಗ್ಯದ ಕುರಿತು ಮಾತನಾಡಿದ ರಜನಿಕಾಂತ್, ನಿತ್ಯ ನಾನು ತಪ್ಪದೇ ಧ್ಯಾನ ಮಾಡುತ್ತೇನೆ. ಇದೇ ನನ್ನ ಆರೋಗ್ಯದ ಗುಟ್ಟು ಎಂದು ಹೇಳಿದರು.