ದಾಂಡೇಲಿ: ಸಾರ್ಥಕ ಜೀವನದ 75 ವರ್ಷಗಳನ್ನು ಪೂರೈಸಿ ತಮ್ಮ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ದಾಂಡೇಲಿಯ ಡಾ. ಜಿ.ವಿ. ಭಟ್ಟ ಹಾಗೂ ಡಾ. ವಿದ್ಯಾ ಭಟ್ಟ ದಂಪತಿಗಳ ಅಭಿನಂದನಾ ಕಾರ್ಯಕ್ರಮದ ನಿಮಿತ್ತ ಶನಿವಾರ ಡಿಲಕ್ಸ್ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಡಾ. ಜಿ.ವಿ. ಭಟ್ಟ ದಂಪತಿಗಳ ಅಭಿನಂದನಾ ಸಮಿತಿ ಹಾಗೂ ಹುಬ್ಬಳ್ಳಿಯ ಡಾ. ಬಿ.ಆರ್. ಪಾಟೀಲ್ ಕ್ಯಾನ್ಸರ್ ಆಸ್ಪತ್ರೆಯ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಹುಬ್ಬಳ್ಳಿ ಕ್ಯಾನ್ಸರ್ ಆಸ್ಪತ್ರೆಯ ಡಾ. ಕರ್ಪೂರಮಠ ಹಾಗೂ ಡಾ. ಉಮೇಶ ಹಳ್ಳಿಕೇರಿ ಭಾಗವಹಿಸಿದ್ದರು. ಈ ಮೂಲಕ ಅಭಿನಂದನಾ ಕಾರ್ಯಕ್ರಮ ಸೇವಾ ರೂಪಕ್ಕೆ ತಿರುಗಿದ್ದು ವಿಶೇಷ ಎನಿಸಿತು.
ಡಾ. ಜಿ.ವಿ. ಭಟ್ಟರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ಡಾ. ಜಿ.ವಿ. ಭಟ್ಟ ದಂಪತಿಗಳ ಅಭಿನಂದನಾ ಸಮಿತಿಯ ಅಧ್ಯಕ್ಷ ಐ.ಪಿ. ಘಟಕಾಂಬಳೆ, ಪ್ರಧಾನ ಕಾರ್ಯದರ್ಶಿ ಬಿ.ಎನ್. ವಾಸರೆ, ಖಜಾಂಚಿ, ರಾಧಾಕೃಷ್ಣ ಹೆಗಡೆ, ಸಂಚಾಲಕ ಯು.ಎಸ್. ಪಾಟೀಲ, ಸಹ ಕಾರ್ಯದರ್ಶಿ ರಾಜೇಶ ತಿವಾರಿ, ಉಪಾಧ್ಯಕ್ಷರಾದ ಪಿ.ವಿ. ಹೆಗಡೆ, ಡಾ. ಎಚ್. ವೈ. ಮೆಹರ್ವಾಡೆ, ಡಾ. ಆರ್.ಜಿ. ಹೆಗಡೆ, ಡಾ. ಪಿ.ವಿ. ಶಾನಭಾಗ, ಪ್ರಕಾಶ ಶೆಟ್ಟಿ, ಗುರುಶಾಂತ ಜಡೆ ಹಿರೇಮಠ ಮುಂತಾದವರು ಸಂಘಟನೆಯಲ್ಲಿ ಪಾಲ್ಗೊಂಡಿದ್ದರು.
ಸಾಯಿ ಸೇವಾ ಸಮಿತಿಯವರು ರಕ್ತ ದಾನಿಗಳಿಗೆ ಹಣ್ಣು ವಿತರಿಸಿದರು. ಸಾಯಿ ಸೇವಾ ಸಮಿತಿಯ ರೇವಣಕರ, ಪ್ರಕಾಶ ಮಾರಿಹಾಳ, ದೀಪಾ ಮರಿಹಾಳ ಸೇರಿದಂತೆ ಹಲವರು ಭಾಗವಹಿಸಿದ್ದರು. ನಗರಸಭಾ ಸದಸ್ಯರು, ವಿದ್ಯಾರ್ಥಿಗಳು, ಮಹಿಳೆಯರೂ, ಸಾರ್ವಜನಿಕರೂ ಸೇರಿದಂತೆ 46 ಜನರು ರಕ್ತದಾನ ಮಾಡಿದರು.