ಕಾರವಾರ: ‘ಅನೇಕ ವರ್ಷಗಳಿಂದ ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು, ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಹೆಸರಿಗೆ ಪಟ್ಟಾ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ (ಕೆಂಪು ಸೇನೆ) ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ಗೆ ಮನವಿ ಸಲ್ಲಿಸಿದರು.

ಇದೇ 26ರಂದು ಹಳಿಯಾಳದಿಂದ ಪಾದಯಾತ್ರೆ ಹೊರಟು ಶನಿವಾರ ಗರ ಪ್ರವೇಶಿಸಿದ ಅವರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

‘ಅರಣ್ಯ ಪ್ರದೇಶದ ಭೂಮಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆ ಜಿ.ಪಿ.ಎಸ್ ಸರ್ವೆ ಮಾಡಿತ್ತು. ಈ ವೇಳೆ ಅಲ್ಲಿ ಅತಿಕ್ರಮಣ ಮಾಡಿಕೊಂಡು ವಾಸಿಸುತ್ತಿದ್ದ ರೈತರ ಎಲ್ಲ ದಾಖಲೆಗಳನ್ನು ಕಾರವಾರದ ಉಪವಿಭಾಗಾಧಿಕಾರಿಗೆ ಸಲ್ಲಿಸಲು ತಿಳಿಸಿದ್ದರು. ಅದರಂತೆ ಎಲ್ಲರೂ ಕೂಡ ಸಲ್ಲಿಸಿದ್ದೆವು. ಆದರೆ ಆ ಅತಿಕ್ರಮಿತ ಅರಣ್ಯ ಜಮೀನುಗಳು ಈವರೆಗೂ ಅಲ್ಲಿ ವಾಸಿಸುತ್ತಿರುವ ರೈತರ ಹೆಸರಿಗೆ ಖಾಯಂ ಆಗಿಲ್ಲ. ಜತೆಗೆ ಅರಣ್ಯ ಹಕ್ಕು ಸಮಿತಿಯಿಂದ ಎಲ್ಲರಿಗೂ ಒಂದು ನೋಟಿಸ್‌ ಬಂದಿದ್ದು, ಅದರಲ್ಲಿ ‘75 ವರ್ಷಗಳ ಹಿಂದಿನ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಉಲ್ಲೇಖಿಸಿದೆ. ಇದು ಅಸಾಧ್ಯವಾದದ್ದು’ ಎಂದು ತಮ್ಮ ಅಳಲನ್ನು ತೋರಿಕೊಂಡರು.
‘ಅಷ್ಟು ವರ್ಷಗಳ ಹಿಂದಿನ ನಮ್ಮ ಪೂರ್ವಜರು ವಿದ್ಯೆ ಕಲಿತಿರಲಿಲ್ಲ. ಆದರೂ ಇರುವ ಎಲ್ಲ ದಾಖಲೆಗಳನ್ನು ನಾವು ನೀಡಿದ್ದೇವೆ. ಅದೂ ಕೂಡ ಸರಿಯಾಗಿಲ್ಲವೆಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳು ಅವರಿಗೆ ಸಂಬಂಧಪಟ್ಟಿರುವ 75 ವರ್ಷಗಳ ಹಿಂದಿನ ದಾಖಲೆಗಳನ್ನು ನೀಡಲಿ ನೋಡೋಣ’ ಎಂದು ಸವಾಲು ಹಾಕಿದರು.
‘ಅರಣ್ಯ ಭೂಮಿಗಳನ್ನು ಅತಿಕ್ರಮಣ ಮಾಡಿದ್ದು ಕೃಷಿಗಾಗಿ. ಅದರ ಮೇಲೆಯ ಎಲ್ಲರೂ ಅವಲಂಬಿತರಾಗಿದ್ದಾರೆ. ಈ ಜಮೀನುಗಳನ್ನು ವಶಪಡಿಸಿಕೊಂಡರೆ ರೈತರ ಬದುಕು ದುಸ್ತರವಾಗಲಿದೆ’ ಎಂದು ತಿಳಿಸಿದ ಅವರು, ‘ಹಳಿಯಾಳದಲ್ಲಿ ಅರಣ್ಯ ಭೂಮಿ ಅತಿಕ್ರಮಿಸಿಕೊಂಡ ಕೆಲ ರೈತರ ಜಮೀನುಗಳನ್ನು ಜಿ.ಪಿ.ಎಸ್ ಸರ್ವೆ ಮಾಡಿಲ್ಲ. ಅದನ್ನು ಶೀಘ್ರ ಪೂರ್ಣಗೊಳಿಸಿ, ಅವರಿಗೂ ಕೂಡ ಪಟ್ಟಾವನ್ನು ಮಂಜೂರು ಮಾಡಿಸಬೇಕು. ನೀಡಿರುವ ದಾಖಲೆಗಳ ಆಧಾರದ ಮೇಲೆ ಹಾಗೂ ಸಾಗುವಳಿ ಮಾಡಿದ ಬಗ್ಗೆ ರಿಉವ ವಹಿವಾಟನ್ನು ಪರಿಶೀಲಿಸಿ ಜಮೀನುಗಳನ್ನು ಮಂಜೂರಿಸಿ, ಪಟ್ಟಾ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.
‘ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ‘ಕಾರವಾರ ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರು ಚಲೋ’ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

RELATED ARTICLES  ದನ ಹುಡುಕಲು ಹೋದವನಿಗೆ ತಗುಲಿದ ಗುಂಡು! ಜನತೆಯಲ್ಲಿ ಆತಂಕ

ಸಂಘಟನೆಯ ಉತ್ತರಕರ್ನಾಟಕ ವಿಭಾಗದ ಅಧ್ಯಕ್ಷ ವಿ.ಬಿ.ರಾಮಚಂದ್ರ, ರಾಜ್ಯ ಘಟಕದ ಕಾರ್ಯದರ್ಶಿ ವಿ.ಬಿ.ವೀರಭದ್ರ ಗೌಡ, ಖಜಾಂಚಿ ಎಸ್.ಸುಬ್ಬಣ್ಣ, ಕೆ.ನಾಗರಾಜ ಹಾಜರಿದ್ದರು.