ಕಾರವಾರ: ಅಂಕೋಲಾದ ಸುಂಕಸಾಳ ಸರ್ಕಾರಿ ಪ್ರೌಢಶಾಲೆಯ ದಶಮಾನೋತ್ಸವ ಕಾರ್ಯಕ್ರಮವು ಇಂದು ನಡೆಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ, ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಾಸಕ ಸತೀಶ್ ಸೈಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಶಕದ ಹೊಸ್ತಿಲ್ಲಿರುವ ಈ ಶಾಲೆ ಅದೆಷ್ಟೋ ಜನರಿಗೆ ಭವಿಷ್ಯ ನೀಡಿರುವುದು ನಮ್ಮ ಹೆಮ್ಮೆ ಎಂದರು.
ಬಿಜೆಪಿ ಮಹಿಳಾ ಮುಖಂಡೆ ರೂಪಾಲಿ ನಾಯ್ಕ ಮಾತನಾಡಿ, ಶಾಲೆ ಇನ್ನಷ್ಟು ವರ್ಷ ಪೂರೈಸಲಿ. ಬಡ ವಿದ್ಯಾರ್ಥಿಗಳು ಇಲ್ಲಿ ಮತ್ತಷ್ಟು ವರ್ಷ ಶಿಕ್ಷಣ ಪಡೆಯುವಂತಾಗಲಿ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂದರು.
ಸುಂಕಸಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ಆಗೇರ, ಉಪಾಧ್ಯಕ್ಷ ಮಂಜುನಾಥ ಭಟ್ಟ, ಜಿಲ್ಲಾ ಪಂಚಾಯ್ತಿ ಸದಸ್ಯ ಜಗದೀಶ ನಾಯಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಲ್ಸನ್ ಡಿಕೋಸ್ತಾ, ಸುಂಕಸಾಳ ಗ್ರಾಮ ಪಂಚಾಯ್ತಿ ಸದಸ್ಯ ಶಿವಪ್ಪ ನಾಯಕ, ಸುರೇಶ ನಾಯಕ ಅಲಗೇರಿ, ಸದಾನಂದ ನಾಯ್ಕ, ಸುರೇಶ್ ಸಿಂಗ್ ಉಪಸ್ಥಿತರಿದ್ದರು.
ಸಂಜೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಿಲ್ಲೆಯ ನುರಿತ ಕಲಾವಿದರಿಂದ ಯಕ್ಷಗಾನ ನಡೆದವು.