ಹೊನ್ನಾವರ ; ತಾಲೂಕಿನ ಹಳದಿಪೂರದ RES ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಗೋಪಿನಾಥ ಸೇವಾ ಸಮಿತಿ, ಯುವ ಸೇವಾ ವಾಹಿನಿ ಹಾಗೂ ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ವತಿಯಿಂದ ಜಿ.ಎಸ್.ಬಿ ಸಾಮಾಜಿಕ ಜಾಗೃತಿ ಸಮಾವೇಶ ಇಂದು ನಡೆಯಿತು.
ಕಾರ್ಯಕ್ರಮವನ್ನು ನಾಗಾಲ್ಯಾಂಡ್ ಗವರ್ನರ್ ಪದ್ಮನಾಭ ಆಚಾರ್ಯ ಅವರು ಉದ್ಘಾಟಿಸಿದರು. ಸಾಣೂರು ನರಸಿಂಹ ಕಾಮತ ಪ್ರಾಸ್ತಾವಿಕ ಮಾತನಾಡಿದರು. ದಿಕ್ಸೂಚಿ ಭಾಷಣ ಮಾಡಿದ ದಯಾನಂದ ಪೈ ಮಾತನಾಡಿ ಇದು ಜಿ.ಎಸ್.ಬಿ ಸಮಾವೇಶ ಎನ್ನುವುದಕ್ಕಿಂತ ಜಿ.ಎಸ್.ಬಿ ಉತ್ಸವ ಎಂದು ಭಾವಿಸುತ್ತೇನೆ. ನಮ್ಮ ಸಮಾಜವನ್ನು ಅಭಿವೃದ್ದಿಯತ್ತ ತರಲು ಯುವಜನತೆ ಸಂಘಟಿತರಾಗಬೇಕು. ಸಂಘಟನೆಯಿಂದ ಹೋರಾಟ ಮಾಡಿದರೆ ಕಲಿಯುಗದಲ್ಲಿ ಏನನ್ನಾದರೂ ಸಾಧಿಸಬಹುದು. ಸಂಘಟನೆಯಿಂದ ಸೇವೆ ಸೇವೆಯಿಂದ ಸಂಘಟನೆ ಸಾಧ್ಯ. ದೇವಾರಾಧನೆ ಹಾಗೂ ಸ್ವಾಮಿ ನಿಷ್ಠೆಯಿಂದ ನಮ್ಮ ಸಮಾಜ ಬೆಳೆದು ಬಂದಿದೆ. ಇಂದು ಆಧುನೀಕರಣ ಹಾಗೂ ನಗರೀಕರಣದ ಪರಿಣಾಮದಿಂದ ನಮ್ಮ ಸಮಾಜದ ಯುವ ಪೀಳಿಗೆಯಲ್ಲಿ ಅಸಡ್ಡೆ ಅಹಂಕಾರ ಹೆಚ್ಚಾಗುತ್ತಿದೆ. ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ನಿಸ್ವಾರ್ಥ ಸೇವೆ ಮಾಡುತ್ತಿದೆ. ನಾವೆಲ್ಲರೂ ಸಮಾಜದ ಅಭಿವೃದ್ಧಿಗೆ ಶ್ರಮ ವಹಿಸಬೇಕು ಎಂದರು.
ನಂತರ ಎಮ್.ವಿ. ಕೇಣಿಯವರು ಸಮಾವೇಶದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸುನೀಲ ಹೆಗಡೆ ಮಾತನಾಡಿ ಹೇಗೆ ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸಿ ಕೊಡಬೇಕೆಂದು ಚರ್ಚಿಸುತ್ತಿದ್ದಾರೆ ಹಾಗೆ ಕೊಂಕಣಿ ಭಾಷೆ ಕೂಡ ರಾಷ್ಟ್ರೀಯ ಮಾನ್ಯತೆ ದೊರಕಿಸಿ ಕೊಡಬೇಕು. ಕೊಂಕಣಿ ಬರವಣಿಗೆ ಮಾಡಲು ಲಿಪಿ ಬೇಕು. ಅದೇ ರೀತಿ ಜಿ.ಎಸ್.ಬಿ ಸಮಾಜದ ನನ್ನನ್ನ ರಾಜಕೀಯವಾಗಿ ಬೆಳೆಯಲು ಸಹಾಯ ಮಾಡಿದ ಎಲ್ಲ ಸಮಾಜದ ನನ್ನ ಹಳಿಯಾಳದ ಜನರನ್ನು ಈ ಮೂಲಕ ನಾನು ಅವರನ್ನು ಅಭಿನಂದಿಸುತ್ತೇನೆ. ನನ್ನನ್ನು ಹಳಿಯಾಳದ ಜನ ಬೆಳೆಸಿದ್ದಾರೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ದೇಶದ ಸಮಗ್ರ ಅಭಿವೃದ್ಧಿಯ ಪಥದಲ್ಲಿ ಸಾಗುವುದಕ್ಕೆ ನಮ್ಮ ಸಮಾಜದ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್ ಎನ್ ಪೈ ಹಾಗೂ ನೂರಾರುಜನ ಕಾರ್ಯಕರ್ತರು ಹಾಜರಿದ್ದರು, ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.