ಶಿರಸಿ: ಕ್ಯಾಲೆಂಡರ್ ಹೊಸ ವರ್ಷದ ಸ್ವಾಗತಕ್ಕೆ ನಗರ ಅಣಿಗೊಳ್ಳುತ್ತಿದೆ. ಅಲ್ಲಲ್ಲಿ ಬಣ್ಣ ಬದಲಾಯಿಸುವ ಮಿಣುಕು ಬೆಳಕುಗಳು ಬೆಳಗುತ್ತಿವೆ, ಪೋಸ್ಟರ್‌ಗಳು ಮೇಲೆದ್ದಿವೆ, ಕೆಲವರು ‘ಓಲ್ಡ್ ಮ್ಯಾನ್’ ಸುಟ್ಟು ಹೊಸವರ್ಷದ ಶುಭಾಶಯ ಕೋರಲು ಸಿದ್ಧತೆ ನಡೆಸಿದ್ದಾರೆ.
ಇಲ್ಲಿನ ಬಾಪೂಜಿ ನಗರದ ಯುವಕರು ‘2017’ ಅನ್ನು ಕಳುಹಿಸಿ ‘2018’ ಅನ್ನು ಸ್ವಾಗತಿಸಲು ದೊಡ್ಡ ಓಲ್ಡ್ ಮ್ಯಾನ್ ಅನ್ನು ರಚಿಸುತ್ತಿದ್ದಾರೆ. ‘ಹೊಸ ವರ್ಷ ಬರಮಾಡಿಕೊಳ್ಳಲು ಮಕ್ಕಳು ನಡೆಸುತ್ತಿರುವ ತಯಾರಿಗೆ ಹಿರಿಯರು, ಹೆಂಗಸರು ಸಹಕಾರ ನೀಡಿದ್ದಾರೆ. ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿರುವ ಗುಜರಾತಿ ದೆವ್ವದ ಮಾದರಿಯ 25 ಅಡಿ ಎತ್ತರದ ಆಕೃತಿಯನ್ನು ಸಿದ್ಧಪಡಿಸಲಾಗುತ್ತಿದೆ.
ಸುರೇಶ ಜೋಗಳೇಕರ, ಸಂಕೇತ ಜೋಗಳೇಕರ, ಶಿರಾಲಿ ಕುಟುಂಬದ ಸಚಿನ್, ಸುಂದರ, ಸಹನಾ, ವಾಣಿ, ರಾಧಾ ಸಿರ್ಸಿಕರ್ ಈ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಸ್ಥಳೀಯ ಜೆ.ಆರ್. ಸಂತೋಷಕುಮಾರ್ ತಿಳಿಸಿದರು. ‘ಬಾಪೂಜಿ ನಗರ ಯುವಕ ಮಂಡಳ 20 ವರ್ಷಗಳಿಂದ ಪ್ರತಿ ವರ್ಷ ಡಿ.31ರ ರಾತ್ರಿ ಓಲ್ಡ್ ಮ್ಯಾನ್ ಸುಟ್ಟು, ಸೇರಿದವರಿಗೆ ಸಿಹಿ ಹಂಚಿ ಹೊಸ ವರ್ಷ ಸ್ವಾಗತಿಸುವ ಆಚರಣೆ ರೂಢಿಸಿಕೊಂಡು ಬಂದಿದೆ.
ಇದನ್ನು ನೋಡಲು ಸುತ್ತಲಿನ ಬಡಾವಣೆಗಳ ನೂರಾರು ಜನರು ಸೇರುತ್ತಾರೆ. ಆರೇಳು ವರ್ಷದ ಹಿಂದೆ ಅಮೆರಿಕದಿಂದ ಬಂದಿದ್ದ ಪ್ರವಾಸಿಯೊಬ್ಬರು ನಮ್ಮ ಕಾರ್ಯಕ್ರಮ ಉದ್ಘಾಟಿಸಿ, ಸಂಭ್ರಮಾಚಣೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಅವರು ಪ್ರತಿಕ್ರಿಯಿಸಿದರು.