ನವದೆಹಲಿ: ಹೊಸ ವರ್ಷ 2018ಕ್ಕೆ ದೇಶಾದ್ಯಂತ ಸಂಭ್ರಮದ ಸ್ವಾಗತ ಕೋರಲಾಗಿದ್ದು, ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಕೋಲ್ಕತಾ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ.

ದೆಹಲಿಯಲ್ಲಿ ವಾಯು ಮಾಲೀನ್ಯ ಮಿತಿ ಮೀರಿರುವುದರಿಂದ ಪಟಾಕಿ ಸಿಡಿತಕ್ಕೆ ಬ್ರೇಕ್ ಹಾಕಲಾಗಿದ್ದು, ವಿದ್ಯುತ್ ದೀಪಗಳ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರಲಾಗಿತ್ತು. ದೆಹಲಿಯಲ್ಲಿ ತೀವ್ರ ಚಳಿಯ ನಡುವೆಯೇ ಕರ್ತವ್ಯ ನಿರತ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ಇನ್ನು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಕಾಳಿಕಾ ಮಾತೆ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಭಕ್ತರು ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದರೆ, ಮತ್ತೊಂದೆಡೆ ಯುವಕರು ಪಟಾಕಿ ಸಿಡಿಸಿ ನೃತ್ಯ ಮಾಡುವ ಮೂಲಕ 2018 ಅನ್ನು ಬರ ಮಾಡಿಕೊಂಡರು. ಅಂತೆಯೇ ದೆಹಲಿ ಖ್ಯಾತ ಸಾಯಿಬಾಬಾ ದೇಗುಲದಲ್ಲೂ ಭಕ್ತರಿಂದ ದೇಗುಲ ತುಂಬಿ ಹೋಗಿತ್ತು. ನೂರಾರು ಭಕ್ತರು ಸಾಯಿಬಾಬಾ ಭಜನೆ ಮಾಡುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡರು.

RELATED ARTICLES  ದಿನಾಂಕ 19/06/2019ರ ರಾಶಿ ಭವಿಷ್ಯ ಇಲ್ಲಿದೆ.

ಇನ್ನು ಮುಂಬೈ, ಚೆನ್ನೈ, ಹೈದರಾಬಾದ್ ನಲ್ಲಿ 2018 ಅನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಉತ್ತರ ಪ್ರದೇಶದ ಲಖನೌ ನಲ್ಲಿ ರೆಸ್ಟೋರೆಂಟ್ ಮತ್ತು ಪಂಚತಾರಾ ಹೊಟೆಲ್ ಗಳು ಗ್ರಾಹಕರಿಂದ ತುಂಬಿ ಹೋಗಿದ್ದು, ಸಂಗೀತ ಮತ್ತು ನೃತ್ಯದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಏತನ್ಮಧ್ಯೆ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಶಿರಡಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಹೊಸ ವರ್ಷದ ನಿಮಿತ್ತ ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಮಾಡಿದರು. ಇತ್ತ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ಐತಿಹಾಸಿಕ ಚಾರ್ ಮಿನಾರ್ ವೃತ್ತ ಜನ ಸಮೂಹದಿಂದ ತುಂಬಿ ತುಳುಕುತ್ತಿತ್ತು. ಅಂತೆಯೇ ಬೆಂಗಳೂರಿನ ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಕಬ್ಬನ್ ಪಾರ್ಕ್ ಗಳು ಕೂಡ ಜನರಿಂದ ತುಂಬಿ ತುಳುಕುತ್ತಿತ್ತು.

RELATED ARTICLES  ಜೆಡಿಎಸ್‍ನ ಏಳು ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಿಂದ ಯಾವುದೇ ಸೂಚನೆ ಬಂದಿಲ್ಲ : ಕೆ.ಬಿ.ಕೋಳಿವಾಡ.

ಆಂಧ್ರ ಪ್ರದೇಶದ ಪವಿತ್ರ ಕ್ಷೇತ್ರ ತಿರುಪತಿಯಲ್ಲೂ ಹೊಸ ವರ್ಷಾಚರಣೆ ನಿಮಿತ್ತ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇತ್ತೀಚೆಗಷ್ಟೇ ವೈಕುಂಠ ಏಕಾದಶಿ ನಿಮಿತ್ತ ತುಂಬಿ ಹೋಗಿದ್ದ ತಿರುಮಲ ದೇಗುಲ ಮತ್ತೆ ಹೊಸ ವರ್ಷಾಚರಣೆ ನಿಮಿತ್ತ ಭಕ್ತರಿಂದ ತುಂಬಿ ಹೋಗಿದೆ.

ಒಟ್ಟಾರೆ ಹೊಸ ವರ್ಷ 2018 ಅನ್ನು ದೇಶಾದ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಸ್ವಾಗತಿಸಲಾಗಿದೆ.