ಕರಾವಳಿ : ವ್ಯಕ್ತಿ ಎಷ್ಟೇ ಮೇಲಕ್ಕೇರಿದರೂ ಸಮಾಜದ ಋಣ ಅವನ ಮೇಲಿದ್ದು, ಅದನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಖ್ಯಾತ ವೈದ್ಯ ಡಾ.ಶಾಂತರಾಂ ಶೆಟ್ಟಿ ತಿಳಿಸಿದ್ದಾರೆ.
ಕರಾವಳಿ ಉತ್ಸವ ಸಮಾರೋಪ ಪ್ರಯುಕ್ತ ಪಣಂಬೂರು ಕಡಲಕಿನಾರೆಯಲ್ಲಿ ನಡೆದ ಸಮಾರಂಭದಲ್ಲಿ, ಕರಾವಳಿ ಗೌರವ ಪ್ರಶಸ್ತಿ 2017 ಸ್ವೀಕರಿಸಿ ಮಾತನಾಡಿದ ಅವರು. ಕರಾವಳಿ ಗೌರವ ಪ್ರಶಸ್ತಿ ಸ್ವೀಕರಿಸುವುದು ತನಗೆ ಅತೀವ ಸಂತೋಷ ತಂದಿದೆ. ಸಾಕಷ್ಟು ವಿದ್ಯಾ ಸಂಸ್ಥೆಗಳ ಮೂಲಕ ದೇಶದಲ್ಲೇ ಖ್ಯಾತಿಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಸೇವೆ ಅತ್ಯಲ್ಪವಾಗಿದ್ದು, ಕರಾವಳಿ ಗೌರವ ಪ್ರಶಸ್ತಿಯು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಇದೇ ವೇಳೆ ಮಂಗಳೂರು ನಗರವು ಅಭಿವೃದ್ಧಿ ಹಾಗೂ ಶುಚಿತ್ವದಲ್ಲಿ ಇನ್ನಷ್ಟು ಮೇಲಕ್ಕೇರಿ ದೇಶದಲ್ಲಿ ನಂಬರ್ ಒನ್ ಆಗಿ ಬರಬೇಕು ಎಂದು ಡಾ. ಶಾಂತರಾಂ ಶೆಟ್ಟಿ ಹೇಳಿದರು.
ಪ್ರಶಸ್ತಿ ಪ್ರಧಾನ ಮಾಡಿದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕರಾವಳಿ ಉತ್ಸವವು ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಣಿಯವಾಗಿ ಆಚರಿಸಲಾಗುವುದು. ಜಿಲ್ಲೆಯಲ್ಲಿ ಎಲ್ಲರೂ ಪರಸ್ಪರ ಸಾಮರಸ್ಯ ದಿಂದ ಜೀವಿಸಬೇಕು ಎಂದರು.
ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್,ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್,ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್,ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮತ್ತಿತರರು ಹಾಜರಿದ್ದರು.