ಇದು ಚಳಿಗಾಲ. ಮೈ–ಮನ ಜಡಗೊಳ್ಳುವ ಸಮಯ. ಶೀತ, ನೆಗಡಿ, ಸೈನಸ್‌, ಅಸ್ತಮಾದಂತಹ ಆರೋಗ್ಯ ಕಾರಣಗಳು ಈ ಕಾಲದಲ್ಲಿ ಹೆಚ್ಚು ನೆನಪಿಗೆ ಬರುತ್ತವೆ. ಏನೂ ಇಲ್ಲದವರೂ ಯಾಕೊ ತಲೆನೋವು ಎನ್ನುತ್ತ ಹಾಸಿಗೆಯಲ್ಲಿ ಮರಳಿ ಮುದುಡಲು ಹಂಬಲಿಸುತ್ತಾರೆ. ಹಾಗೆಂದು ವ್ಯಾಯಾಮಕ್ಕೆ ವಿರಾಮ ನೀಡಬೇಡಿ. ತಡೆಯುವ ಚಳಿಗೆ ಸೆಡ್ಡು ಹೊಡೆದು ಹೊರಗಡಿ ಇಡಲು ಪ್ರೇರಣೆಯಾಗುವ ಕೆಲ ಅಂಶಗಳು ಇಲ್ಲಿವೆ.

ಬೇಸಿಗೆಯಲ್ಲಿ ಎಲ್ಲರೂ ವ್ಯಾಯಾಮಪ್ರಿಯರಾಗಿ ಬಿಡುತ್ತಾರೆ. ಬೆಳ್ಳಂಬೆಳಿಗ್ಗೆ ಒಳಗೆ ನುಸುಳುವ ಹೊಂಬಿಸಿಲು ಬೇಗನೇ ಎದ್ದು ವ್ಯಾಯಾಮಕ್ಕೆ ನಿಲ್ಲಲು, ಮೈದಾನಕ್ಕೆ ಓಡಲು, ಜಿಮ್‌ನತ್ತ ಸಾಗಲು ಪ್ರೇರಣೆ ನೀಡುತ್ತದೆ. ಆದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ನಿತ್ಯ ವ್ಯಾಯಾಮಕ್ಕಿಳಿಯುವವರು ವಿರಳವೇ.

ಕಿಟಕಿಯ ಸರಳುಗಳಿಂದ ಬಿಸಿಲು ಎದ್ದು ಬಂದು ಮುಖಕ್ಕೆ ರಾಚುವವರೆಗೂ ಹಾಸಿಗೆ ಬಿಟ್ಟೇಳಲು ಮನಸ್ಸು ಬಾರದು. ಮತ್ತೆ ಮತ್ತೆ ಮುದುಡಿ ಹಾಸಿಗೆಗೆ ಒತ್ತಿಕೊಳ್ಳುವ ಶರೀರ, ಮೇಲೆದ್ದು ಆಚೆ ಬಂದರೂ ಮೆತ್ತನೆಯ ಸೋಫಾ ಮೇಲೆ ಕಾಲು ಮಡಿಸಿ ಮುದ್ದೆಯಾಗಿ ಕುಳಿತು ಬಿಸಿ ಬಿಸಿ ಕಾಫಿ ಹೀರಬೇಕೆನ್ನುತ್ತದೆ ಮನ. ಇಂಥ ತನು–ಮನವನ್ನು ವ್ಯಾಯಾಮ, ಓಟ, ಈಜು, ಜಿಮ್‌ಗಳ ಸಹವಾಸಕ್ಕೆ ಹೇಗೆ ತಾನೆ ಸಿದ್ಧಗೊಳಿಸುವುದು? ಚುಮು ಚುಮು ಚಳಿಯಲ್ಲಿ ಹೊರಗಡಿ ಇಡುವ ಸವಾಲನ್ನು ಜಯಿಸಬೇಕು. ಅದು ಹೇಗೆ?

ಥಂಡಿಯಲ್ಲಿ ಒಲ್ಲದ ಮನವನ್ನು, ಹಿಂಜರಿಯುವ ದೇಹವನ್ನು ಹೊರದಬ್ಬಲು ಕೆಲವು ಸುಲಭದ ಉಪಾಯಗಳ ಮೊರೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಫಿಟ್‌ನೆಸ್‌ ತಜ್ಞರು.

RELATED ARTICLES  ಒತ್ತಡದ ಜೀವನ ನಿಮ್ಮನ್ನು ಖಿನ್ನತೆಗೆ ತಳ್ಳುತ್ತಿದೆಯೇ? ಇಲ್ಲಿದೆ ದಾರಿ.

ನಿಮ್ಮ ಮನಸು ಹಾಗೂ ದೇಹವನ್ನು ವ್ಯಾಯಾಮಕ್ಕೆ ಅಣಿಗೊಳಿಸುವ ಸಿದ್ಧತೆ ಹಾಸಿಗೆಯಿಂದಲೇ ಆರಂಭವಾಗಬೇಕು. ಹಾಸಿಗೆಯಲ್ಲಿ ನಿಮ್ಮ ಸ್ನಾಯುಗಳನ್ನು ಸಡಿಲಿಸಿಕೊಳ್ಳಿ. ಕಣ್ಣು ಬಿಡುತ್ತಿದ್ದಂತೆ ಕತ್ತು ತಿರುಗಿಸುವ, ಸೊಂಟ, ಬೆನ್ನು ಕೈ–ಕಾಲುಗಳನ್ನು ಸೆಟೆಸುವ ಮೂಲಕ ಅಂಗಾಂಗಗಳನ್ನು ಸಡಿಲಗೊಳಿಸಿ. ನಂತರ ಒಂದೈದು ನಿಮಿಷ ಏರೋಬಿಕ್, ಜಂಪಿಂಗ್‌ ಜಾಕ್‌ನಂತಹ ಕೆಲವು ಸುಲಭ ವ್ಯಾಯಾಮಗಳನ್ನೂ ಮನೆಯಲ್ಲಿಯೇ ಮಾಡಿ ವಾರ್ಮ್‌ ಅಪ್‌ ಆಗಬೇಕು.

ಹೊರಗಿನ ಚಳಿಗೆ ಆರಂಭದಲ್ಲಿ ದೇಹ ಹೊಂದಿಕೊಳ್ಳುವಂತೆ ಬೆಚ್ಚನೆಯ ಉಡುಪು ಧರಿಸುವುದೂ ಮುಖ್ಯ. ಇದಕ್ಕಾಗಿ ಎರಡೋ ಮೂರೋ ಪದರದ ಮಂತ್ರ ಅನುಸರಿಸಬಹುದು. ಬಿಸಿಲೇರಿದಂತೆ ಮೇಲಿನ ಲೇಯರ್‌ ಕಳಚಲು ಅನುವಾಗುತ್ತದೆ. ಟ್ರ್ಯಾಕ್‌ ಪ್ಯಾಂಟ್‌, ಟೀಶರ್ಟ್‌ ಮೇಲೆ ಎರಡು ಜಾಕೆಟ್‌ ಕೂಡ ಧರಿಸಬಹುದು. ವಾರ್ಮ್‌ ಅಪ್‌ ಆಗುತ್ತಿದ್ದಂತೆ ಒಂದು ಜಾಕೆಟ್‌ ಕಳಚಿ ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಬಿಸಿಲು ಏರಿದಂತೆ ಮತ್ತೊಂದನ್ನೂ ಕಳಚಿ ಮನೆಯತ್ತ ಹೆಜ್ಜೆ ಹಾಕಬಹುದು.

ಚಳಿಗಾಲದ ಈ ಸಮಸ್ಯೆಯನ್ನು ಸುಲಭವಾಗಿ ನೀಗಲು ನಿಮ್ಮದೇ ಆದ ವರ್ಕೌಟ್‌ ತಂಡವನ್ನು ಕಟ್ಟಿಕೊಳ್ಳಿ. ಮನೆಯ ಹೊರಗೆ ವ್ಯಾಯಾಮ ಅಥವಾ ವರ್ಕೌಟ್‌ ಮಾಡುವವರು ಏಕಾಂಗಿಯಾಗಿ ಹೊರಡುವುದು ಬೇಸರ ಎನಿಸಿದಾಗ ಈ ಗುಂಪು ಸಹಾಯಕ. ಒಬ್ಬರಿಂದ ಒಬ್ಬರು ಸ್ಫೂರ್ತಿ ಪಡೆಯಬಹುದು. ಒಬ್ಬರಿಗೆ ಬೇಸರವಾದಾಗ ಮತ್ತೊಬ್ಬರು ಉತ್ಸಾಹ ತುಂಬಬಹುದು. ತಂಡದೊಂದಿಗೆ ಹೊರಬೀಳುವುದು ಒಂದು ಬಗೆಯ ಮೋಜು. ಹೀಗಾಗಿ ಜಿಮ್‌ ಅಥವಾ ಬೆಳಗಿನ ಓಟಕ್ಕೆ ಗುಂಪಾಗಿ ಹೋಗುವುದು ಉತ್ತಮ. ಯೋಗ, ವ್ಯಾಯಾಮ, ಜಿಮ್‌, ರನ್ನಿಂಗ್‌ ಏನೇ ಆಗಿರಲಿ. ಪ್ರತಿದಿನ ಮಾಡಲೇಬೇಕು ಎನ್ನುವ ನಿಯಮವೇನೂ ಇಲ್ಲ. ಚಳಿಗಾಲದಲ್ಲಿ ವಾರಕ್ಕೆ ಒಂದೆರಡು ದಿನ ತಪ್ಪಿದರೂ ಪರವಾಗಿಲ್ಲ. ಆದರೆ ನಿಯಮಿವಾಗಿರಬೇಕು.

RELATED ARTICLES  ಹಾಲು ಮತ್ತು ಬೆಲ್ಲ ಅನೇಕ ರೋಗಗಳ ನಿವಾರಣೆಗೆ ರಾಮ ಬಾಣ!

ಮನುಷ್ಯನ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ಆದರೆ ಆ ವ್ಯಾಯಾಮವೇ ಆರೋಗ್ಯಕ್ಕೆ ಮಾರಕವಾಗಬಾರದು. ಆಸ್ತಮಾ, ಹೃದಯದ ತೊಂದರೆಗಳು, ಕೀಲುರೋಗ, ಸಂಧಿವಾತ ಇರುವವರು ಈ ಹವಾಮಾನದಲ್ಲಿ ತುಸು ಎಚ್ಚರಿಕೆಯಿಂದ ಇರಬೇಕು. ತಜ್ಞರ ಅಭಿಪ್ರಾಯ ಕೇಳಬೇಕು. ಸಾಧ್ಯವಾದರೆ ಮನೆಯಲ್ಲಿಯೇ ಕೆಲವು ಸರಳ ವ್ಯಾಯಾಮಗಳನ್ನು ಮಾಡಿಬಿಡುವುದೂ ಉತ್ತಮ.

ಅತಿ ಹೆಚ್ಚು ಚಳಿಗೆ ಒಡ್ಡಿಕೊಳ್ಳುವುದರಿಂದ ಕೆಲವರಿಗೆ ಫ್ರಾಸ್ಟ್‌ಬೈಟ್ ಮತ್ತು ಹೈಪೋಥರ್ಮಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಕಣ್ಣುಗಳು, ಮೂಗು ಮತ್ತು ಕಿವಿಗಳ ಚರ್ಮದ ಮೇಲೆ ಇದರ ಪರಿಣಾಮ ಕಾಣಲಾರಂಭಿಸುತ್ತದೆ. ಕೆಲವೊಮ್ಮೆ ಕೈ ಮತ್ತು ಕಾಲುಗಳಲ್ಲೂ ಕಾಣಿಸಿಕೊಳ್ಳಬಹುದು. ಅಂಗಾಂಗಗಳು ಮರಗಟ್ಟುವುದು, ಸಂವೇದನೆಯನ್ನು ಕಳೆದುಕೊಳ್ಳುವುದು, ನಡುಕ, ಮಾತಿನ ಹಿಡಿತ ತಪ್ಪುವುದು, ಆಯಾಸ ಕಂಡುಬಂದಲ್ಲಿ ಕೂಡಲೇ ದೇಹವನ್ನು ನಿಧಾನಕ್ಕೆ ವಾರ್ಮ್‌ ಅಪ್‌ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆಯುವುದೂ ಉತ್ತಮ.