ಕಾರವಾರ: ಹಳ್ಳದಲ್ಲಿ ಸೊಂಟದೆತ್ತರಕ್ಕೆ ನೀರು ತುಂಬಿದ್ದರೂ ಲೆಕ್ಕಿಸದೇ ಅದರಲ್ಲೇ ಕಿ.ಮೀ. ದೂರ ಕ್ರಮಿಸಿ ಕುಡಿಯುವ ನೀರು ತರುವ ಸಾಹಸಕ್ಕೆ ಇಲ್ಲಿನ ಕಿನ್ನರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ಇಳಿದಿದ್ದಾರೆ.

ಕಿನ್ನರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭಾಗವಾಡ, ಚಾಮಕುಳಿವಾಡ, ಅಂಬೆಜೂಗ, ಝಾಡಕಿ ಭಾಗದ ಅನೇಕ ಮನೆಗಳಲ್ಲಿ ಬಾವಿ ಇದ್ದು, ನೀರು ಕೂಡ ಸಾಕಷ್ಟಿದೆ. ಆದರೆ ಬಹುತೇಕ ಬಾವಿಗಳ ನೀರು ಉಪ್ಪು ಮಿಶ್ರಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ದೂರದ ನಾಯ್ಕವಾಡಾದ ‘ಹನಮಾಬಾಯಾ’ ಎಂದು ಕರೆಯುವ ಬಾವಿಯಿಂದ ಕುಡಿಯುವ ನೀರು ತರಲಾಗುತ್ತದೆ. ಇದಕ್ಕಾಗಿ ಮಕ್ಕಳು, ಮಹಿಳೆಯರು, ಹಿರಿಯರು ಎನ್ನದೇ ಗ್ರಾಮದವರೆಲ್ಲರೂ ಪ್ರತಿದಿನ ಬೆಳಿಗ್ಗೆ ಎದ್ದು ಕೊಡ ಹಿಡಿದು ಆ ಬಾವಿಯತ್ತ ಸಾಗುತ್ತಾರೆ.

ಎಚ್ಚರ ತಪ್ಪಿದರೆ ಅಪಾಯ: ಆದರೆ ಅದಕ್ಕಾಗಿ ಕಾಳಿ ಹಿನ್ನೀರಿನ್ನು ದಾಟಿ ಅವರು 1 ಕಿ.ಮೀ. ದೂರ ಸಾಗಬೇಕು. ರಸ್ತೆಯ ಮೂಲಕ ತೆರಳಿದರೆ ಆ ಬಾವಿಗೆ 3 ಕಿ.ಮೀ. ಆದರೆ ಸಮೀಪವೆಂದು ಕಾಳಿ ಹಿನ್ನೀರಿನ ಹಳ್ಳದಲ್ಲಿಯೇ ಸಾಗಿ ಕೊಡ ಹೊತ್ತು ಕುಡಿಯುವ ನೀರಿನೊಂದಿಗೆ ಮರಳುತ್ತಾರೆ.

RELATED ARTICLES  ನವಮುರ್ಡೇಶ್ವರದ ನಿರ್ಮಾತೃ, ಕರ್ಮಯೋಗಿ ಆರ್.ಎನ್. ಶೆಟ್ಟಿ ಇನ್ನಿಲ್ಲ.

ಉಪ್ಪು ನೀರಿನ ಹಾವಳಿ: ಗ್ರಾಮದ ಸಮೀಪದಲ್ಲೇ ಕಾಳಿನದಿ ಹರಿಯುತ್ತದೆ. ಉಬ್ಬರ ಸಮಯದಲ್ಲಿ ಅರಬ್ಬಿ ಸಮುದ್ರದ ನೀರು ಕಾಳಿನದಿ ಹರಿವಿನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಹಾಗಾಗಿ ನದಿಯು ಸಮುದ್ರ ಸೇರುವ ಸಂಗಮ ಸ್ಥಳದಿಂದ ಸುಮಾರು 15 ಕಿ.ಮೀ­.ವರೆಗಿನ ನದಿ ನೀರು ಉಪ್ಪು­ ಮಿಶ್ರಿತವಾಗಿರುತ್ತದೆ. ಅದು ಇಲ್ಲಿನ ಜಮೀನುಗಳಿಗೆ ನುಗ್ಗವುದಲ್ಲದೇ, ಬಾವಿಗಳ ನೀರು ಕೂಡ ಉಪ್ಪು ಮಿ­ಶ್ರಿತವಾಗಿ ಪರಿವರ್ತಿತ­ವಾಗುತ್ತಿದೆ.

‘ಈ ಪ್ರದೇಶದಲ್ಲಿ ಮರದಿಂದ ಮಾಡಿದ ಸೇತುವೆಯೊಂದಿತ್ತು. ಆಗ ಈ ರೀತಿ ನೀರಿನಲ್ಲಿ ಇಳಿದು ತೆರಳಬೇಕಾದ ಪರಿಸ್ಥಿತಿ ಇರಲಿಲ್ಲ. ಆದರೆ ಅದು ಕಳೆದ ನಾಲ್ಕೈದು ವರ್ಷಗಳ ಹಿಂದೆ ಅದು ಮುರಿದು ಹೋಗಿದೆ. ಹೀಗಾಗಿ ಇಲ್ಲೊಂದು ಸೇತುವೆ ಮಂಜೂರು ಮಾಡಿಸುವಂತೆ ಅನೇಕ ಬಾರಿ ಇಲ್ಲಿನ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದ್ದಾಗ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ತಿಳಿಸಿದರು.

RELATED ARTICLES  ಕಾರಿನಲ್ಲಿದ್ದ ಚಿನ್ನ ಕದ್ದ ಆರೋಪಿ ಪೊಲೀಸ್ ಬಲೆಗೆ..!

ನೀರಿನ ಪೂರೈಕೆ ಇದೆ: ‘ಗ್ರಾಮ ಪಂಚಾಯ್ತಿ ವತಿಯಿಂದ ಸಮೀಪದ ಬೋರ್‌ವೆಲ್‌ಗಳಿಂದ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಅಲ್ಲಿನ ಜನರಿಗೆ ದೂರದ ಆ ಬಾವಿಯ ನೀರು ಕುಡಿದು ರೂಢಿಯಾಗಿರುವುದರಿಂದ ಅದನ್ನೇ ಅವರು ಮುಂದುವರಿಸಿದ್ದಾರೆ. ಈಗಾಗಲೇ ಸೇತುವೆಗಾಗಿ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದ್ದೆವು. ಆದರೆ ಆ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ಬೃಹತ್ ಮೊತ್ತದ ಅನುದಾನ ಅಗತ್ಯವಿದೆ’ ಎನ್ನುತ್ತಾರೆ ಕಿನ್ನರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂದೀಪ ರಾಣೆ.