ಗದಗ: ಮಹದಾಯಿ ನದಿ ನೀರಿಗಾಗಿ ರೈತಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈತರ ಹೋರಾಟದೊಂದಿಗೆ ಕೈಜೋಡಿಸಿರುವ ಬಿಜೆಪಿ ಬುಧವಾರ ನರಗುಂದ ಬಂದ್’ಗೆ ಕರೆ ನೀಡಿದೆ.
ಬಿಜೆಪಿ ಬಂದ್’ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ನರಗುಂದ ತಾಲೂಕಿನಲ್ಲಿ ಇಂದು ಬೆಳಿಗ್ಗೆ 5ಗಂಟೆಯಿಂದಲೇ ಬಂದ್ ಪ್ರಾರಂಭವಾಗಿದೆ. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ತಡೆ ಹಿಡಿದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪರಿಣಾಮ ಹುಬ್ಬಳ್ಳಿ-ಬೆಂಗಳೂರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಡುವಿನ ವಾಹನ ಸಂಚಾರ ಸ್ಥಗಿತಗೊಂಡು ವಾಹನಗಳಿಲ್ಲದೆ ಹೆದ್ದಾರಿಗಳು ಬಿಕೋ ಎನ್ನುತ್ತಿವೆ.
ಅಲ್ಲದೆ, ಬಿಜೆಪಿ ಕಾರ್ಯಕರ್ತರು ನರಗುಂದದ ಗಲ್ಲಿ ಗಲ್ಲಿಗಳಲ್ಲಿ ಟಯರ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬಂದ್ ಹಿನ್ನಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.
ನರಗುಂದದಲ್ಲಿ ಬಂದ್ ಆಚರಿಸುತ್ತಿರುವ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿರುವ ಪೊಲೀಸರು ಈಗಾಗಲೇ ಜಿಲ್ಲೆಯಲ್ಲಿ 3 ಡಿವೈಎಸ್ಪಿ, 10 ಸಿಪಿಐ, 14 ಪಿಎಸ್ಐ, 29 ಎಎಸ್ಐ. ಕೆಎಸ್ಆರ್’ಪಿ, 5 ಡಿಆರ್ ತುಕಡಿ, 120 ಪೊಲೀಸರು, 100ಕ್ಕೂ ಹೆಚ್ಚು ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.