ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ಉದ್ದೇಶಗಳಿಗೆ ನೀಡಿದ ಮಂಜೂರಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ ವಿವಿಧ ರೀತಿಯ ಅರ್ಜಿಗಳಲ್ಲಿ ಇಂದಿನವರೆಗೆ 41,169 ರಷ್ಟು ಅರ್ಜಿಗಳು ತಿರಸ್ಕøತಗೊಂಡಿರುವುದು ಆಘಾತಕರವಾಗಿದೆ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 85,819 ಅರ್ಜಿಗಳು ಬಂದಿದ್ದು ಅವುಗಳಲ್ಲಿ ಬುಡಕಟ್ಟು ಜನಾಂಗದ 3,569, ಸಮೂಹ ಉದ್ದೇಶಕ್ಕೆ 3,388 ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಸಂಬಂಧಿಸಿ 78,862 ಅರ್ಜಿಗಳು ಬಂದಿದ್ದು ಬಂದಿರುವಂಥ ಅರ್ಜಿಗಳಲ್ಲಿ ಶೇ.47.98 ರಷ್ಟು ಅರ್ಜಿಗಳು ತಿರಸ್ಕಾರಗೊಂಡಿರುತ್ತದೆ. ಬಂದಿರುವಂಥ ಅರ್ಜಿಗಳಲ್ಲಿ ನಗರ ಪ್ರದೇಶಗಳ 11,202 ಅರ್ಜಿಗಳ ಸಹ ಒಳಗೊಂಡಿರುತ್ತದೆ. ಆದ್ದರಿಂದ ಅರಣ್ಯವಾಸಿಗಳ ಪರವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ರೂಪದ ಹೋರಾಟ ಜರುಗಿಸಲಾಗುವುದು ಎಂದರು.
ತಿರಸ್ಕತವಾಗಿರುವಂಥ ಅರ್ಜಿಗಳಲ್ಲಿ 1,350 ಬುಡಕಟ್ಟು ಜನಾಂಗಕ್ಕೆ ಸೀಮಿತವಾಗಿದ್ದು, ಸಮೂಹ ಉದ್ದೇಶಕ್ಕೆ 2,261 ಅರ್ಜಿಗಳು ಆಗಿದ್ದಲ್ಲಿ, ಪಾರಂಪರಿಕ ಅರಣ್ಯವಾಸಿಗಳಿಗೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆ 37,558 ಆಗಿದೆ. ಅತೀ ಹೆಚ್ಚು ತಿರಸ್ಕಾರವಾಗಿರುವುದು ಭಟ್ಕಳ 6887, ಶಿರಸಿ 5673. ಹೊನ್ನಾವರ 5617, ಕುಮಟಾ 5063, ಸಿದ್ದಾಪುರ 3767, ಯಲ್ಲಾಪುರ 2976, ಅಂಕೋಲಾ 2889, ಜೋಯಿಡಾ 2516, ಕಾರವಾರ 2311, ಹಳಿಯಾಳ 2199, ಮುಂಡಗೋಡ 1281 ಅರ್ಜಿಗಳು ತಿರಸ್ಕøತಗೊಂಡಿರುತ್ತದೆ ಎಂದು ತಿಳಿಸಿದರು.
ಜಿಲ್ಲಾದ್ಯಂತ ಒಟ್ಟೂ 11,202 ನಗರ ಪ್ರದೇಶದಿಂದ ಅರ್ಜಿಗಳು ಬಂದಿದ್ದು ಇಲ್ಲಿಯವರೆಗೆ ಒಂದೂ ಅರ್ಜಿಯೂ ವಿಲೇವಾರಿ ಆಗದೇ ಇರುವುದು ಮಂಜೂರಿ ಪ್ರಕ್ರಿಯೆಯಲ್ಲಿನ ಮಂದಗತಿಗೆ ಕೈಗನ್ನಡಿಯಾಗಿದೆ ಎಂದರು.
ಜಿಲ್ಲಾದ್ಯಂತ ಮಂಜೂರಿ ಪ್ರಕ್ರಿಯೆಯ ಪ್ರಮಾಣವನ್ನು ತಾಲೂಕಾವಾರು ಅವಲೋಕಿಸಿದಾಗ ಮುಂಡಗೋಡ ಮತ್ತು ಯಲ್ಲಾಪುರ ತಾಲೂಕಿನ ವಿಲೇವಾರಿಯ ಪ್ರಮಾಣ ಮಂದಗತಿಯಲ್ಲಿ ಇದೆ. ಮುಂಡಗೋಡದಲ್ಲಿ ಶೇ 18.09 ಹಾಗೂ ಯಲ್ಲಾಪುರದಲ್ಲಿ ಶೇ. 31.31 ಅರ್ಜಿಗಳು ವಿಲೇವಾರಿ ಆಗಿದ್ದು ಇರುತ್ತದೆ ಎಂದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳು ಸಾರಾಸಗಟಾಗಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ಸೂಕ್ತ ನ್ಯಾಯದಾನ ಕೊಡುವ ದಿಶೆಯಲ್ಲಿ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಧಿಯನ್ನು ನಿಗದಿಗೊಳಿಸಿ ಸದ್ರಿ ಕಾಲಮಾನದಂಡದ ಅಡಿಯಲ್ಲಿ ಅರಣ್ಯವಾಸಿಗಳಿಗೆ ನ್ಯಾಯ ದೊರಕದಿದ್ದಲ್ಲಿ ತೀವ್ರ ಹೋರಾಟ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗುವುದು. ಚುನಾವಣೆ ಸಂದರ್ಭದಲ್ಲಿ ಮಂಜೂರಿ ಆಶ್ವಾಸನೆ ನೀಡಿ ವೈಫಲ್ಯವಾಗಿರುವ ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ವಿ.ಎಮ್.ಬೈಂದೂರ್ ಹಾಗೂ ತಿಮ್ಮಣ್ಣ ಮರಾಠಿ ಇದ್ದರು.