ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಂಭ್ರಮದ ಮೊದಲ ದಿನ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂತೆ ಉದ್ಘಾಟಿಸಿ ಮಾತನಾಡಿದ ಜಿ.ಎಸ್.ಬಿ ಯುವಸೇವಾ ವಾಹಿನಿಯ ಅಧ್ಯಕ್ಷ ಹಾಗೂ ಯುವ ಉದ್ಯಮಿ ಮುಕುಂದ ಶಾನಭಾಗ ಹೆಗಡೆಕರ್ ಮಾತನಾಡುತ್ತಾ, ಇಂದಿನ ವಿದ್ಯಾರ್ಥಿಗಳು ನೇರಾನೇರ ವ್ಯವಹಾರ ಕೌಶಲ್ಯತೆ ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದ್ದು, ಇಂಟರ್ ನೆಟ್ ಬ್ಯಾಂಕಿಂಗ್ ಹಾಗೂ ಡಿಜಿಟಲ್ ವ್ಯವಹಾರಗಳನ್ನೂ ಕಲಿತಿರಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ತಾವು ಕಲಿತ ಶಾಲೆ ಇಂದು ಸಾಮಾಜಿಕವಾಗಿ ಉನ್ನತ ಸ್ತರದಲ್ಲಿ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳಲ್ಲಿ ಇರುವುದನ್ನು ಪ್ರಶಂಸಿಸಿದರು. ಮಕ್ಕಳ ವ್ಯಾಪಾರದ ಚುರುಕುತನವನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಎಲ್ಲ ಸ್ಟಾಲ್ ಗಳನ್ನೂ ಸಂಪರ್ಕಿಸಿ ಖರೀದಿಸಿ ಹುರಿದುಂಬಿಸಿದರು.
ಮುಖ್ಯಾಧ್ಯಾಪಕ ಎನ್.ಆರ್.ಗಜು ಹಾಗೂ ಶಿಕ್ಷಕ ವೃಂದದವರು ಯುವ ಉದ್ಯಮಿ ಹಳೆಯ ವಿದ್ಯಾರ್ಥಿಯನ್ನು ಗೌರವಿಸಿದರು. ಶಿಕ್ಷಕ ವಿಷ್ಣು ಭಟ್ಟ ನಿರೂಪಿಸಿದರು. ಶಿಕ್ಷಕ ಕಿರಣ ಪ್ರಭು ವಂದಿಸಿದರು. ಶಿಕ್ಷಕ ಎಲ್.ಎನ್.ಅಂಬಿಗ ಮತ್ತು ಸುರೇಶ ಪೈ ಸಂತೆ ಸಂಯೋಜಿಸುವಲ್ಲಿ ಎಲ್ಲ ಶಿಕ್ಷಕರೊಂದಿಗೆ ನೆರವಾದರು.
ಸುಮಾರು 30 ವಿವಿಧ ಬಗೆಯ ಸ್ಟಾಲ್ ಗಳ ಮೂಲಕ ವಿದ್ಯಾರ್ಥಿಗಳು ಸುಮಾರು 30 ಸಾವಿರ ರೂಪಾಯಿಗಳನ್ನು ವ್ಯವಹರಿಸಿ ಲಾಭಗಳಿಸಿದರು.