ಮುಂಜಾನೆ ಹಾಸಿಗೆ ಬಿಟ್ಟೇಳಲರಾದಷ್ಟು ಚಳಿ, ಸಂಜೆಯಾದರೆ ಮನೆಯಿಂದ ಹೊರಬರಲಾಗದ ಸ್ಥಿತಿ. ಇನ್ನೊಂದೆಡೆ ಹೂವು, ಹಣ್ಣು, ತರಕಾರಿ ವರ್ತಕರು, ಮಾರಾಟಗಾರರು ಮತ್ತು ವಾಹನ ಚಾಲಕರು ರಾತ್ರಿ ರಸ್ತೆಯಂಚಿನಲ್ಲೇ ಬೆಂಕಿ ಹಾಕಿಕೊಂಡು ಚಳಿ ಕಾಯಿಸುವ ದೃಶ್ಯ.

ಇದು ಉತ್ತರ ಕನ್ನಡದ ಈ ವರ್ಷದ ಸದ್ಯದ ವಾತಾವರಣ. ಮಲೆನಾಡಿನಲ್ಲಿ ಹಾಗೂ ಕರಾವಳಿಯಲ್ಲಿ ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಜೆ, ರಾತ್ರಿ ಹಾಗೂ ಮುಂಜಾನೆಯ ವೇಳೆ ತಾಪಮಾನದ ಪ್ರಮಾಣದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬರುತ್ತಿದೆ. ಮಾಗಿ ಚಳಿಗೆ ಉತ್ತರ ಕನ್ನಡ ಗಡಗಡ ನಡುಗಲಾರಂಭಿಸಿದೆ.

ಕುಮಟಾ,ಹೊನ್ನಾವರ,ಭಟ್ಕಳ, ಕಾರವಾರ, ಶಿರಸಿ,ಸಿದ್ದಾಪುರ,ಯಲ್ಲಾಪುರ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲೆಡೆ ಚಳಿಯ ಪ್ರಮಾಣ ಏರುಗತಿಯಲ್ಲಿದ್ದು, ಚಳಿ ಹಾಗೂ ಶೀತಗಾಳಿಯ ಹೊಡೆತಕ್ಕೆ ನಾಗರಿಕರು ತತ್ತರಿಸಿ ಹೋಗಿದ್ದಾರೆ.ಉತ್ತರ ಕನ್ನಡದ ವಿವಿಧ ನಗರದಲ್ಲಿ ಮಧ್ಯರಾತ್ರಿಯ ವೇಳೆ ಕನಿಷ್ಠ ತಾಪಮಾನದ ಪ್ರಮಾಣ 18 ಡಿಗ್ರಿಗಿಂತ ಕಡಿಮೆ ದಾಖಲಾಗುತ್ತಿರುವುದು ಚಳಿಯ ತೀವ್ರತೆಗೆ ಸಾಕ್ಷಿಯಾಗಿದೆ. ಮತ್ತೊಂದೆಡೆ, ಹಗಲು ವೇಳೆ ಬಿಸಿಲ ಬೇಗೆ ಹೆಚ್ಚುತ್ತಿದೆ.

RELATED ARTICLES  ಹೊಸಬಣ್ಣ ನಾಯಕರವರಿಂದ ಅಂಕೋಲಾ-ಕೆಂಕಣಿ-ಹುಳಸೆ ಬಸ್ಸ್ ಪುನರಾರಂಭ

ಇತ್ತೀಚಿನ ದಿನಗಳಲ್ಲಿ ಹಗಲು ವೇಳೆಯ ಗರಿಷ್ಠ ತಾಪಮಾನದ ಪ್ರಮಾಣ ೩0 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುತ್ತಿದೆ. ಚಳಿ ಹಾಗೂ ಬಿಸಿಲಿನ ಜುಗಲ್‌ಬಂಧಿಯು ನಾಗರಿಕರನ್ನು ಕಂಗಲಾಗುವಂತೆ ಮಾಡಿದೆ. ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ತುತ್ತಾಗುವಂತೆ ಮಾಡಿದೆ. ಶೀತ, ನೆಗಡಿ, ಜ್ವರದ ಬಾಧೆ ಹೆಚ್ಚುತ್ತಿದೆ. ಆಸ್ಪತ್ರೆಗೆ ಎಡತಾಕುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಅದರಲ್ಲಿಯೂ ವಯೋವೃದ್ಧರು, ಮಕ್ಕಳ ಪಾಡಂತೂ ಹೇಳತೀರದಾಗಿದೆ. ಮಧ್ಯವಯಸ್ಕರೇ ಚಳಿಗೆ ತತ್ತರಿಸಿ ಹೋಗಿದ್ದಾರೆ.

ಜಿಲ್ಲೆಯಲ್ಲಿ ಚಳಿಗಾಲದ ಪ್ರಾರಂಭದ ತಿಂಗಳುಗಳಲ್ಲಿ ಚಳಿಯ ಪ್ರಮಾಣ ಅಷ್ಟೆನೂ ತೀವ್ರವಾಗಿರಲಿಲ್ಲ. ಆದರೆ ಡಿಸೆಂಬರ್ ಎರಡನೆಯ ವಾರದಿಂದ ಚಳಿಯ ತೀವ್ರತೆಯಲ್ಲಿ ಕ್ರಮೇಣ ಏರಿಕೆ ಆರಂಭವಾಗಿದೆ. ಸಂಜೆಯಾಗುತ್ತಿದ್ದಂತೆ ದಿಢೀರ್ ಆಗಿ ವಾತಾವರಣದಲ್ಲಿ ತಾಪಮಾನದಲ್ಲಿ ಕುಸಿತ ಕಂಡುಬರುತ್ತಿದ್ದು, ಕುಳಿರ್ಗಾಳಿ ಬೀಸಲಾರಂಭಿಸುತ್ತಿದೆ. ಮಧ್ಯರಾತ್ರಿ ಹಾಗೂ ಮುಂಜಾನೆಯ ವೇಳೆಯಲ್ಲಂತೂ ವಾಹನ ಚಾಲನೆ ಮಾಡುವುದೇ ಕಷ್ಟಕರವಾಗಿ ಪರಿಣಮಿಸಿದೆ. ಆ ಪ್ರಮಾಣದಲ್ಲಿ ಚಳಿ ಬೀಳುತ್ತಿದೆ. ಚಳಿಯ ಕಾರಣದಿಂದಲೇ ರಸ್ತೆಗಳಲ್ಲಿ ಮುಂಜಾನೆಯ ವೇಳೆ ವಾಹನಗಳ ದಟ್ಟಣೆ ಸಾಕಷ್ಟು ಕಡಿಮೆಯಿರುವುದು ಕಂಡುಬರುತ್ತಿದೆ.

RELATED ARTICLES  ಹೊನ್ನಾವರದಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ: ಬಾಲಕಿಯೂ ಸೇರಿ ಇಬ್ಬರಿಗೆ ಗಾಯ.

ಚಳಿಯ ಕಾರಣದಿಂದ ಮುಂಜಾನೆಯ ವೇಳೆ ವಾಯು ವಿಹಾರ, ವ್ಯಾಯಾಮಕ್ಕೆ ತೆರಳುವವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತದೆ ವರದಿ. ಇಬ್ಬನಿ ಮತ್ತು ಚಳಿಯ ಆಟದಲ್ಲಿ ನಾಗರಿಕರು ಮಾತ್ರ ಹೈರಾಣಾಗಿ ಹೋಗಿದ್ದಾರೆ. ಎಷ್ಟೇ ಸ್ವೆಟರ್, ಬೆಚ್ಚನೆಯ ಉಡುಪು ಧರಿಸಿ ರಕ್ಷಣಾತ್ಮಕವಾಗಿ ಹೊರಬಂದರೂ ಚಳಿ ಮಾತ್ರ ಬೆಂಬಿಡದೆ ಕಾಡುತ್ತಿದೆ.