ಭಟ್ಕಳ: ಪುರಸಭಾ ಅಂಗಡಿಕಾರ ಮೃತ ರಾಮಚಂದ್ರ ನಾಯ್ಕ ಸಹೋದರ ಈಶ್ವರ ನಾಯ್ಕ ಹೆಸ್ಕಾಂ ಇಲಾಖೆಯಲ್ಲಿ ಮೀಟರ್ ರೀಡಿಂಗ ಕೆಲಸದ ನಿಮಿತ್ತ ಇಲ್ಲಿನ ಜಾಗಟೆಬೈಲ್‍ನಲ್ಲಿ ಬಿಲ್ ಕಲೆಕ್ಟ ಮಾಡಲು ಹೋದ ಸಂಧರ್ಭದಲ್ಲಿ ಏಕಾಏಕಿ 5-6 ಮಂದಿ ಅಪರಿಚಿತರು ಆತನ ಮೇಲೆ ಹಲ್ಲೆಗೆ ಯತ್ನಿಸಿ ಖಾರ ಪುಡಿ ಎರಚಿದ್ದಾರೆ.
ಇಲ್ಲಿನ ಹೆಸ್ಕಾಂ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮೀಟರ್ ರೀಡಿಂಗ ಆಗಿ ಕೆಲಸ ನಿರ್ವಹಿಸುತ್ತಿದ್ದ ಈಶ್ವರ ನಾಯ್ಕ ಬುಧವಾರದಂದು ಎಂದಿನಂತೆ ಬಿಲ್ ಕಲೆಕ್ಟ ಮಾಡಲು ಇಲ್ಲಿನ ಜಾಗಟೆಬೈಲ್ ಕಡೆಗೆ ತೆರಳಿದ್ದು, ಬುಧವಾರದಂದು ಬೆಳಿಗ್ಗೆ 10.30 ಸುಮಾರಿಗೆ ಮನೆಯೊಂದಕ್ಕೆ ವಿದ್ಯುತ್ ಬಿಲ್ ಕಲೆಕ್ಟ ಮಾಡುವ ಸಂಧರ್ಭದಲ್ಲಿ ಆತನ ಮೇಲೆ 5-6 ಮಂದಿ ಮಂಕಿ ಕ್ಯಾಪ್ ಧರಿಸಿ ಬಂದ ಅಪರಿಚಿತರು ಹಲ್ಲೆಗೆ ಯತ್ನಿಸಿದ್ದು ಓರ್ವ ಈಶ್ವರ ನಾಯ್ಕ ಮುಖದ ಮೇಲೆ ಖಾರದ ಪುಡಿ ಎರಚಿ ಆತನ ಬಟ್ಟೆಯನ್ನು ಹರಿದು ಆತನ ಕೈಯಲಿದ್ದ ಇಲಾಖೆಯ ಮೀಟರ್ ಡಿವೈಸನ್ನು ನೆಲಕ್ಕೆ ಕೆಡವಿದ್ದಾರೆ ಎನ್ನಲಾಗಿದೆ.
ನಂತರ ಈಶ್ವರ ನಾಯ್ಕ ಕಂಗಾಲಾಗಿ ಹಲ್ಲೆಕ್ಕೊರರಿಂದ ತಪ್ಪಿಸಿಕೊಂಡು ಪಕ್ಕದಲ್ಲಿದ್ದ ಮೈದಾನಕ್ಕೆ ತೆರಳಿ ಜನರಿಗೆ ವಿಷಯ ಮುಟ್ಟಿಸಿದ್ದಾರೆ. ಅಲ್ಲಿನ ಸ್ಥಳಿಯರೆಲ್ಲ ಸೇರಿ ಆತನನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಸರಕಾರಿ ಆಸ್ಪತ್ರೆಗೆ ಬಂದ ಆತನ ಸಹೋದರರು ಪೋಲೀಸ್ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಡಿ.ವೈ.ಎಸ್.ಪಿ. ಶಿವಕುಮಾರ ಹಾಗೂ ಈಶ್ವರ ನಾಯ್ಕ ಸಹೋದರರ ನಡುವೆ ಮಾತಿನ ಚಕಮಕಿ ಉಂಟಾಯಿತು. ಪ್ರಕರಣವನ್ನು ಗ್ರಾಮೀಣ ಪೋಲೀಸ್ ಠಾಣೆ ಪಿಎಸೈ ಬಿ. ಮಂಜಪ್ಪ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ಘಟನೆ ನಡೆದ ಸ್ಥಳಕ್ಕೆ ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಎಎಸ್ಪಿ ಗೋಪಾಲ್ ಬ್ಯಾಕೋಡ್, ಡಿವೈಎಸ್ಪಿ ಕೆ.ಎ. ಶಿವಕುಮಾರ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಈಶ್ವರ ನಾಯ್ಕ ಮನೆ ಹತ್ತಿರದ ಅಂಗಡಿ ಹಾಗು ಪಕ್ಕದಲ್ಲಿ ನಿಲ್ಲಿಸಿರುವ ಆಟೋ ರಿಕ್ಷಾಕ್ಕೆ ಕಿಡಿಗೇಡಿಗಳು ಬೆಂಕಿಹಾಕಲು ಪ್ರಯತ್ನಿಸಿದ್ದು ಈ ಬಗ್ಗೆ ಪೋಲೀಸ ತನಿಖೆ ಚುರುಕಾಗಿಲ್ಲವಾಗಿದೆ ಎಂಬ ಆರೋಪ ಈಶ್ವರ ನಾಯ್ಕ ಕುಟುಂಬದವರದ್ದಾಗಿದೆ. ಪೋಲೀಸರು ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.