ಮೈಸೂರು: ಟಿ. ನರಸೀಪುರ ತಾಲೂಕಿನ ಮೂಗೂರು ಗ್ರಾಮದ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಡಿ. 3ರಂದು ವಿಜೃಂಭಣೆಯಿಂದ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಇತಿಹಾಸ ಪ್ರಸಿದ್ಧ ದೇವಸ್ಥಾನದ ಜಾತ್ರಾ ಮಹೋತ್ಸವ ಯಾವುದೇ ಅನಾಹುತಕ್ಕೆ ಎಡೆ ಮಾಡಿಕೊಡದೆ ನಡೆದಿದ್ದು, ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ದೂರು ಮಾಡಿದೆ. ಏಕೆ ಅಂತೀರಾ….

ಹೌದು! ದೇವಸ್ಥಾನಕ್ಕೆ ಸೇರಿದ ರಥದ ಚಕ್ರದಲ್ಲಿ ಬಿರುಕು ಕಾಣಿಸಿಕೊಂಡು ವರ್ಷಗಳೇ ಉರುಳಿ ಹೋದರೂ ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಈ ಸಮಸ್ಯೆಗಳ ಮಧ್ಯೆಯೇ ರಥೋತ್ಸವ ನೆರವೇರಿಸಲಾಗಿದೆ. ಕೆಲವು ತಿಂಗಳ ಹಿಂದಷ್ಟೇ ಬಳ್ಳಾರಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ರಥದ ಚಕ್ರ ಕುಸಿದ ಪರಿಣಾಮ ಸಂಭವಿಸಿದ ಅನಾಹುತ, ಇಲ್ಲಿಯೂ ಸಂಭವಿಸಬಹುದೇ ಎಂಬ ಅಳಕು ಜನರನ್ನು ಕಾಡುತ್ತಿತ್ತು. ಹೀಗಾಗಿಯೇ ಬಿರುಕು ಬಿಟ್ಟ ತ್ರಿಪುರ ಸುಂದರಿ ಅಮ್ಮನವರ ರಥ ಎಳೆಯುವ ಸಂದರ್ಭದಲ್ಲಿ ಭಕ್ತಿಗಿಂತ ಭಯದಿಂದಲೇ ರಥ ಎಳೆದ ಭಕ್ತರ ಸಂಖ್ಯೆಯೇ ಹೆಚ್ಚಾಗಿತ್ತು ಎಂದು ಭಕ್ತರು ತಿಳಿಸಿದ್ದಾರೆ.

RELATED ARTICLES  ಜಿಎಸ್‍ಟಿ ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ.

ಮೈಸೂರು ರಾಜಮನೆತನದ ಆರಾಧ್ಯ ದೇವತೆಯೆಂದೇ ಕರೆಯಲಾದ ತ್ರಿಪುರ ಸುಂದರಿ ದೇವಸ್ಥಾನದ ರಥದ ಚಕ್ರಗಳನ್ನು ಸುಸ್ಥಿತಿಗೆ ತರುವಂತೆ ಭಕ್ತರು ಹಲವು ಬಾರಿ ಮನವಿ ಮಾಡಿದರೂ ಮುಜರಾಯಿ ಇಲಾಖೆ ಮಾತ್ರ ನಿರ್ಲಕ್ಷಿಸುತ್ತಿದೆ. ಪ್ರತಿ ಜಾತ್ರಾ ಮಹೋತ್ಸವ ನಡೆದಾಗಲೂ ಆತಂಕದಿಂದಲೇ ರಥವನ್ನು ಎಳೆಯುವ ಸ್ಥತಿ ಭಕ್ತರದ್ದಾಗಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES  ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಪ್ರಚಾರ ಸಾಮಗ್ರಿಯನ್ನು ಶೀಘ್ರ ತೆರವುಗೊಳಿಸುವಂತೆ ಆದೇಶ.

ನೂರಾರು ವರ್ಷಗಳಿಂದ ಬಳಸಲಾಗುತ್ತಿರುವ ರಥಕ್ಕೆ ಕಾಯಕಲ್ಪ ಒದಗಿಸದೆ, ದುರಸ್ಥಿಯಲ್ಲಿರುವ ರಥ ಬಳಸುವುದು ಸರಿಯಲ್ಲ. ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಸ್ವ-ಕ್ಷೇತ್ರದಲ್ಲಿಯೇ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸುತ್ತಿರುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಹೀಗಾಗಿ ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಭಕ್ತರ ಕೂಗಿಗೆ ವರ ನೀಡುತ್ತದೆಯೋ ಕಾದು ನೋಡಬೇಕಿದೆ.