ಕಾರವಾರ; ‘ಯುವಕರಿಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಮರು ಪ್ರವೇಶಿಸುತ್ತಿದ್ದೇನೆ. ಇನ್ನು 10 ದಿನದಲ್ಲಿ ಪಕ್ಷ ಯಾವುದೆಂದು ನಿರ್ಧರಿಸಿ ತಿಳಿಸುತ್ತೇನೆ. ಇದಕ್ಕಾಗಿಯೇ ಶುಕ್ರವಾರ ಬೆಂಗಳೂರಿಗೆ ತೆರಳಿ, ಎಲ್ಲ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಭೇಟಿಯಾಗಲಿದ್ದೇನೆ’ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದರು.

ಗುರುವಾರ ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರದ ಪ್ರಮುಖರ ಸಭೆ ಕರೆದು ಚರ್ಚಿಸಿ, ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘ಈ ಕ್ಷೇತ್ರದ ಜನತೆ ಯಾವುದೇ ಪಕ್ಷವನ್ನೂ ನಂಬಿಲ್ಲ. ಇಲ್ಲಿ ವ್ಯಕ್ತಿ ಆಧಾರಿತ ಚುನಾವಣೆ ನಡೆಯಲಿದೆ. ಹೇಗೆ ರಾಹುಲ್ ಗಾಂಧಿಯವರಿಂದಾಗಿ ಪ್ರಧಾನಿ ಮೋದಿಯವರ ಹವಾ ಎಲ್ಲೆಡೆ ಇದೆಯೊ, ಹಾಗೆಯೇ ಹಾಲಿ ಶಾಸಕರ ಕಾರ್ಯಗಳಿಂದಾಗಿಯೇ ಜನ ನಮ್ಮತ್ತ ಒಲವು ತೋರಿದ್ದಾರೆ’ ಎಂದು ಟೀಕಿಸಿದರು.

‘ಕಳೆದ ನಾಲ್ಕೂವರೆ ವರ್ಷ ಸಾರ್ವಜನಿಕ ಜೀವನದಿಂದ ದೂರ ಇದ್ದು, ಆಯ್ಕೆಯಾಗಿದ್ದ ಶಾಸಕರ ಮೇಲೆ ಯಾವುದೇ ಆರೋಪ ಮಾಡದೇ, ಅಭಿವೃದ್ಧಿ ಕಾರ್ಯಗಳಿಗೆ ತಡೆ ಮಾಡದೇ ಇದ್ದೆ. ಆದರೆ ಆ ವೇಳೆಯಲ್ಲಿ ಜನರ ಸಮಸ್ಯೆಗಳನ್ನು ಹಾಗೂ ರಾಜಕೀಯ ಜೀವನದಲ್ಲಿ ನಾನು ಮಾಡಿದ್ದ ತಪ್ಪುಗಳನ್ನು ಅವಲೋಕಿಸಿದ್ದೆ. ಗಡಿ ಭಾಗವಾದ ಈ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು. ಇಲ್ಲಿನ ರಸ್ತೆಗಳೆಲ್ಲವೂ ಕಾಂಕ್ರಿಟೀಕರಣ ಆಗಬೇಕು. ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ಮಾರ್ಪಾಡು ಮಾಡಬೇಕು. ಕನಿಷ್ಟ ₨ 5 ಸಾವಿರ ಕೋಟಿ ವಿಶೇಷ ಅನುದಾನ ತರಬೇಕು. ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ಜತೆಗೆ ರಾಜ್ಯದಲ್ಲಿ ಈ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸಬೇಕು. ಅದಕ್ಕಾಗಿ ನಾನು ರಾಜಕೀಯಕ್ಕೆ ಮರು ಪ್ರವೇಶ ಮಾಬೇಕು ಎಂದು ತೀರ್ಮಾನಿಸಿದ್ದೆ’ ಎಂದು ತಿಳಿಸಿದರು.

RELATED ARTICLES  ಜೀವನ ಶೈಲಿಯೇ ಅನಾರೋಗ್ಯಕ್ಕೆ ಕಾರಣ : ಡಾ.ಅಶೋಕ ಕುಮಾರ್

‘ನಾನು ಕಾಲು ಹಿಡಿದು ರಾಜಕೀಯ ಮಾಡುವವನಲ್ಲ. ನಮ್ಮ ಕುಟುಂಬ ಸ್ವಾಭಿಮಾನವನ್ನು ಬಿಟ್ಟಿಲ್ಲ. ಬಿಜೆಪಿ ರಾಜ್ಯ ನಾಯಕರನ್ನು ಭೇಟಿ ಮಾಡಿ ಚುನಾವಣೆಗೆ ನಿಲ್ಲುವ ಬಗ್ಗೆ ತಿಳಿಸಿದ್ದೆ. ಆದರವರು ಜಿಲ್ಲೆಯ ನಾಯಕರನ್ನು ಕೇಳುವಂತೆ ತಿಳಿಸಿದ್ದರು. ಅದರಂತೆ ಇಲ್ಲಿನ ಸಂಸದ ಹಾಗೂ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರನ್ನು ಭೇಟಿ ಮಾಡಬೇಕು ಎಂದು ನಗರದ ಹಿರಿಯ ಬಿಜೆಪಿ ಮುಖಂಡರೊಬ್ಬರಿಗೆ ತಿಳಿಸಿದ್ದೆ. ಆದರೆ ಕಳೆದ ಮೂರು ತಿಂಗಳಿನಿಂದ ಕಾಯುತ್ತಿದ್ದರೂ ಕೂಡ ಸಚಿವರು ನನ್ನ ಜತೆ ಮಾತನಾಡಲು ಅವಕಾಶ ನೀಡಿಲ್ಲ. ನಮ್ಮ ನಾಯಕರು ಯಾರಿಗೆ ಬೇಕಾದರೂ ಹೊಡೆಯಲು ಹಿಂಜರಿಯುವುದಿಲ್ಲ. ಹೀಗಾಗಿ ಜಾಗೃತೆಯಿಂದಲೇ ಅವರ ಬಳಿ ಹೋಗಬೇಕು. ಹೀಗಾಗಿ ಸ್ವಾಭಿಮಾನದಿಂದಲೇ ಅವರ ಬಳಿ ಅವಕಾಶ ಕೇಳಿದ್ದೆ’ ಎಂದು ಹೇಳಿದರು.

‘ಚುನಾವಣೆ ಬಂದಾಗ ಮಾತ್ರ ನೌಕಾನೆಲೆ ಯೋಜನೆಗೆ ಭೂಮಿ ಕಳೆದುಕೊಂಡವರ ನೆನಪು ರಾಜಕೀಯ ಮುಖಂಡರಿಗಾಗುತ್ತದೆ. ಸಂಸದರು ನಿರಾಶ್ರಿತರ ಪರಿಹಾರದ ಕುರಿತು ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿ ಕಳಕಳಿ ತೋರಿಸಿದ್ದಾರೆ. ಅದರ ಬದಲು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದರೆ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇತ್ತು’ ಎಂದು ಅಭಿಪ್ರಾಯಿಸಿದರು.

RELATED ARTICLES  ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ.

‘ಅಂಕೋಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಆತ್ಮವೊಂದು ಈ ಕ್ಷೇತ್ರದಲ್ಲಿ ತಿರುಗಾಡುತ್ತಿದೆ’ ಎಂದು ಹೆಗಡೆಯವರು ಹೇಳಿದ ಮಾತು ನೋವನ್ನುಂಟು ಮಾಡಿದೆ. ಬಿಜೆಪಿಗಾಗಿ ನಾನು ತ್ಯಾಗಗಳನ್ನು ಮಾಡಿದ್ದು ತಪ್ಪಾ? ನನ್ನ ಸಮಸ್ಯೆಗಳೇನು ಎನ್ನುವುದನ್ನು ಒಮ್ಮೆ ವಿಚಾರಿಸಿಕೊಳ್ಳಲು ಕೂಡ ಯಾರೂ ನನ್ನ ಸಂಪರ್ಕಕ್ಕೆ ಬಂದಿಲ್ಲ. ಆದರೆ ಅದೇ ಜಾಗದಲ್ಲಿ ಆರ್.ವಿ.ದೇಶಪಾಂಡೆ ಇದ್ದಿದ್ದರೆ ನನ್ನ ಸುಖ– ದುಃಖಗಳನ್ನು ಕೇಳದೆ ಇರುತ್ತಿರಲಿಲ್ಲ. ನನ್ನಿಂದ ನಿಮಗೇನಾದರು ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ’ ಎಂದು ಸಭೆಯಲ್ಲಿ ಸಚಿವ ದೇಶಪಾಂಡೆ ಅವರಿಗೆ ಕ್ಷಮೆ ಕೋರಿದರು.

ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಜನ್ಮ ದಿನಾಚರಣೆ, ಉತ್ಸವದ ಆಯೋಜನೆ ಬಿಟ್ಟರೆ ಬೇರಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮುಂದಿನ ತಿಂಗಳ 11ರಂದು ನನ್ನದೂ ಕೂಡ ಜನ್ಮ ದಿನಾಚರಣೆ ಇದೆ. ಅಭಿಮಾನಿಗಳು, ಜನರ ತೀರ್ಮಾನದಂತೆ ಅದನ್ನು ಆಚರಿಸಿಕೊಳ್ಳುತ್ತೇನೆ ಎಂದು ಆನಂದ ಅಸ್ನೋಟಿಕರ್ ಮಾಧ್ಯಮದವರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಸಿಆರ್‌ಝೆಡ್‌ ನಿಯಮ ಉಲ್ಲಂಘಿಸಿ ಕಡಲತೀರಗಳಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹೋರಾಟಗಾರ ಹೆಂಜಾ ನಾಯಕ, ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯತ್ತ ಒಂದು ದಿನವೂ ಕೂಡ ಮುಖ ಹಾಕಿಲ್ಲ ಎಂದು ದೂರಿದರು.