ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯು ಜಿಲ್ಲೆಯಲ್ಲಿಯೇ ಉತ್ತಮ ಅನುದಾನಿತ ಶಾಲೆಯಾಗಿದ್ದು, ಹೆಚ್ಚು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿದ್ದು, ಉತ್ತಮ ವಿದ್ಯಾದಾನಕ್ಕೆ ಹೆಸರಾಗಿದೆ. ಕೆನರಾ ಎಜ್ಯುಕೇಶನ್ ಸೊಸೈಟಿಯು ಇಲ್ಲಿಯ ಪ್ರೌಢಶಾಲೆಯಲ್ಲಿ ಪಿಯು ವಿಭಾಗವನ್ನು ತೆರೆದು ಈ ಭಾಗದ ವಿದ್ಯಾರ್ಥಿಗಳಿಗೆ ಮನೆಬಾಗಿಲಲ್ಲಿಯೇ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲು ಮುಂದಾಗಬೇಕೆಂದು ಇಲ್ಲಿಯ ಪ್ರಸಿದ್ಧ ಅಡಿಕೆ ಉದ್ಯಮಿ ನಾಗೇಶ ಶಾನಭಾಗ ಕರೆ ನೀಡಿದರು. ಶಾಲೆಯ ವಾರ್ಷಿಕ ಸ್ನೇಹ ಸಂಭ್ರಮದ ಬೆಳಗಿನ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಯಮಿ ಮೋಹನ ಶಾನಭಾಗ ಅವರು ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಪೂರೈಸಲು ವಿದ್ಯಾಭಿಮಾನಿಗಳು ಮುಂದೆ ಬರಬೇಕೆಂದು ಕರೆ ನೀಡಿದರು. ಆಡಳಿತ ಮಂಡಳಿಯ ಅನುಮತಿ ನೀಡಿದರೆ ತಾವು ಆ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಕೆ.ಇ.ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಅವರು ಉತ್ತಮ ವಿದ್ಯಾಭ್ಯಾಸ ಮಾಡಿ ಸಂಸ್ಕಾರವಂತರಾಗಲೆಂದು ಹಾರೈಸಿದರು. ಪಾಲಕ ಪ್ರತಿನಿಧಿ ವಿ.ಟಿ.ಮಡಿವಾಳ ಮತ್ತು ಗುರುನಾಥ ಶಾನಭಾಗ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ಸುಮನ್ ಮಡಿವಾಳ ಹಾಗೂ ಐಶ್ವರ್ಯಾ ಶಾನಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಇ.ಸೊಸೈಟಿಯ ಕಾರ್ಯದರ್ಶಿ ಎಸ್.ಎನ್.ಪ್ರಭು ಮಾತನಾಡಿ ವಿದ್ಯಾರ್ಜನೆಗೆ ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿ ಪೂರೈಸುತ್ತಾ ಬಂದಿದ್ದು ಶಿಕ್ಷಕ ವೃಂದದವರು ಸಂಸ್ಥೆಯನ್ನು ನಾಮಾಂಕಿತಗೊಳಿಸುವಲ್ಲಿ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು.
ಪ್ರಾರಂಭದಲ್ಲಿ ಕುಮಾರ ದರ್ಶನ ಪುರಾಣಿಕ ಪ್ರಾರ್ಥನೆಗೈದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಸ್ವಾಗತಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಪರಿಚಯಿಸಿದರು. ಶಿಕ್ಷಕ ಕಿರಣಪ್ರಭು ಮತ್ತು ಸುರೇಶ ಪೈ ದತ್ತಿನಿಧಿ ಪುರಸ್ಕರಿಸಿದರು. ಶಿಕ್ಷಕ ಕೆ.ಎಸ್.ಅನ್ನಪೂರ್ಣಾ ವಂದಿಸಿದರು.