ಶಿರಸಿ : ಶಿಕ್ಷಣ ಎಂಬುದು ಎಲ್ಲರಿಗೂ ಅತಿ ಅವಶ್ಯಕ. ಅದರೊಂದಿಗೆ ನಾವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನಮ್ಮ ಜಾನಪದ, ನಾಟಕ, ಸಂಸ್ಕೃತಿ ಯನ್ನು ಉಳಸಿ ಬೆಳೆಸಿಕೊಂಡು ಹೋಗಬೇಕು ಎಂದು ಎಮ್ಇಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಭೀಮಣ್ಣ ನಾಯ್ಕ ಕರೆ ನೀಡಿದರು.
ಇಲ್ಲಿನ ಎಮ್ಇಎಸ್ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಗುರವಾರದಿಂದ ಪ್ರಾರಂಭವಾದ ಎರಡು ದಿನಗಳ ಜಿಲ್ಲಾ ಮಟ್ಟದ ಜಾನಪದ ಹಾಗೂ ನಾಟಕ ಸ್ಪರ್ಧೆಯನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಂದು ಇಲ್ಲಿ ನಡೆಯುತ್ತಿರುವ ಸ್ಪರ್ಧೆಗಳಂತಹ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಶಿಸಿ ಹೋಗುತ್ತಿರುವ ನಮ್ಮ ಜಾನಪದ, ಸಾಂಪ್ರದಾಯಿಕ ಕೆಲೆಯನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಟಕಕಾರ ಶ್ರೀಪಾದ ಭಟ್ ಪ್ರಕೃತಿಯಲ್ಲಿ ಯಾವ ಬದಲಾವಣೆ ಆಗಬೇಕೋ ಅದನ್ನು ಅಭಿನಯಿಸುವುದು ಜಾನಪದ ನೃತ್ಯವಾಗಿದೆ. ಅದರಂತೆ ಸಮಾಜದಲ್ಲಿನ ಬದಲಾವಣೆ ಅಭಿನಯಿಸುವುದು ನಾಟಕವಾಗಿದೆ. ಎರಡೂ ಸಕಾರಾತ್ಮಕ, ಸಾಮಾಜಿಕ ಚಟುವಟಿಕೆಯಾಗಿದೆ. ಸಮಾಜದಲ್ಲಿ ಉತ್ತಮ ಪರಿಣಾಮ ಬೀರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮಕ್ಕೆ ಶುಭ ಸಂದೇಶ ಕಳುಹಿಸಿದ ಎಮ್ಇಎಸ್ ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷ ವರೇಂದ್ರ ಕಾಮತ್ ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಗೆ ತುತ್ತಾಗುತ್ತಿರುವ ಕುರಿತು ಬೀದಿ ನಾಟಕವನ್ನು ಮಾಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ರವಿ ನಾಯಕ, ವಿ.ಪಿ.ಹೆಗಡೆ ವೈಶಾಲಿ ಮುಂತಾದವರು ಇದ್ದರು.