ವಾಷಿಂಗ್ಟನ್‌ : ‘ನ್ಯೂಕ್ಲಿಯರ್‌ ಬಟನ್‌ ನನ್ನ ಟೇಬಲ್‌ ಮೇಲೆಯೇ ಸದಾ ಕಾಲ ಇರುತ್ತದೆ’ ಎಂದು ತನ್ನ ಅಣ್ವಸ್ತ್ರಗಳ ಸಮರ ಸನ್ನದ್ಧತೆಯನ್ನು ಎರಡು ದಿನಗಳ ಹಿಂದಷ್ಟೇ ಕೊಚ್ಚಿಕೊಂಡಿದ್ದ ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್‌ ಜೋಂಗ್‌ ಉನ್‌ ಗೆ ತನ್ನ ಅಣ್ವಸ್ತ್ರಗಳ ಮೇಲೆ ನಿಯಂತ್ರಣವೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆತ ಪ್ರಯೋಗಾರ್ಥವಾಗಿ ಹಾರಿಸಿದ್ದ ಅಣು ಕ್ಷಿಪಣಿಯೊಂದು 40 ಕಿ.ಮೀ. ದೂರ ಸಾಗಿ, ಆಕಸ್ಮಿಕವಾಗಿ ಚೂರುಚೂರಾಗಿ, ಉತ್ತರ ಕೊರಿಯದ ನಗರವೊಂದರ ಮೇಲೆಯೇ ಬಿದ್ದಿತ್ತು ಎಂಬ ವಿಷಯ ಇದೀಗ ಬಹಿರಂಗವಾಗಿದೆ.

ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಿಂದ ಸುಮಾರು 150 ಕಿ.ಮೀ. ದೂರದ, 2 ಲಕ್ಷ ಜನಸಂಖ್ಯೆ ಇರುವ ತೋಕ್‌ಶೋನ್‌ ನಗರದ ಮೇಲೆ ಹ್ವಾಸೋಂಗ್‌-12 ಬ್ಯಾಲಿಸ್ಟಿಕ್‌ ಕ್ಷಿಪಣಿ ಆಕಸ್ಮಿಕವಾಗಿ ಎರಗಿತ್ತು ಮತ್ತು ಪೌರ ವಾಸದ ಪ್ರದೇಶಗಳಲ್ಲಿ ಅಪಾರವಾದ ನಾಶ ನಷ್ಟ ಉಂಟು ಮಾಡಿತ್ತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿರುವುದನ್ನು ಉಲ್ಲೇಖೀಸಿ “ದಿ ಇಂಡಿಪೆಂಡೆಂಟ್‌’ ವರದಿ ಮಾಡಿದೆ.

RELATED ARTICLES  ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ : ಮೈಸೂರು ಯುವರಾಜ ಯದುವೀರ್‌.

ಹ್ವಾಸೋಂಗ್‌-12 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಕಳೆದ ವರ್ಷ ಎಪ್ರಿಲ್‌ 28ರಂದು ಪರೀಕ್ಷಾರ್ಥವಾಗಿ ಉಡಾಯಿಸಲಾಗಿತ್ತು. ಮಧ್ಯಮ ದೂರ ವ್ಯಾಪ್ತಿಯ ಈ ಬ್ಯಾಲಿಸ್ಟಿಕ್‌ ಮಿಸೈಲ್‌ ತನ್ನ ಗಮ್ಯ ಗುರಿಯ ಮೇಲೆ ಎರಗುವ ಮುನ್ನವೇ, ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ, ಚೂರು ಚೂರಾಗಿ ಉರಿದು ಬಿದ್ದಿತ್ತು. ಆದರೆ ಅದು ಹಾಗೆ ಉರಿದು ಬಿದ್ದದ್ದು ಎರಡು ಲಕ್ಷ ಜನಸಂಖ್ಯೆ ಇರುವ ತೋಕ್‌ಶಾನ್‌ ಪಟ್ಟದ ಮೇಲೆ ಎಂಬ ಬಗ್ಗೆ ಹೊಸ ಸಾಕ್ಷ್ಯಗಳು ಅನಂತರದಲ್ಲಿ ಲಭಿಸದವು ಎಂದು ದಿ ಇಂಡಿಪೆಂಡೆಂಟ್‌ ವರದಿ ಮಾಡಿದೆ.

RELATED ARTICLES  ಯೋಧರನ್ನು ನನ್ನದೇ ಕುಟುಂಬದಂತೆ ಭಾವಿಸುತ್ತೇನೆ ; ಪ್ರಧಾನಿ ನರೇಂದ್ರ ಮೋದಿ

ಸರ್ವಾಧಿಕಾರಿ ಆಳ್ವಿಕೆ ಇರುವ ಉತ್ತರ ಕೊರಿಯದಲ್ಲಿ ಎಲ್ಲವೂ ರಹಸ್ಯಮಯವಾಗಿ ನಡೆಯುವ ಕಾರಣ ಅದರ ಐಆರ್‌ಬಿಎಂ ಬ್ಯಾಲಿಸ್ಟಿಕ್‌ ಮಿಸೈಲ್‌ ಅದರ ನಗರದ ಮೇಲೆಯೇ ಎರಗಿ ಪೌರ ವರ್ಗಕ್ಕೆ ಭಾರೀ ನಾಶ ನಷ್ಟ ಉಂಟುಮಾಡಿತೆಂಬ ವಿಷಯ ಬಹಿರಂಗವಾಗಿಯೇ ಇರಲಿಲ್ಲ. ಈ ಕ್ಷಿಪಣಿ ಪತನದ ದುರಂತವು ಉತ್ತರ ಕೊರಿಯಕ್ಕೆ ಭಾರೀ ಹಿನ್ನಡೆ ಮತ್ತು ಆಘಾತ ಉಂಟುಮಾಡಿದ ವಿದ್ಯಮಾನವಾಗಿತ್ತು. ಕಾರಣ ಅದರ ಹುಚ್ಚಾಪಟ್ಟೆ ಅಣ್ವಸ್ತ್ರ ವೃದ್ಧಿ ಕಾರ್ಯಕ್ರಮ ಅಮೆರಿಕ ಸಹಿತ ವಿಶ್ವಕ್ಕೇ ಬೆದರಿಕೆಯಾಗಿ ಪರಿಣಮಿಸಿತ್ತು.