ಕುಮಟಾ: ತಾಲೂಕಿನ ಬಾಡ, ಕಾಗಲ, ಹೆಗಡೆ ಪಂಚಾಯತ್‌ ವ್ಯಾಪ್ತಿಯ ರೈತರು ಕೋಡ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 800 ಎಕರೆಗೂ ಹೆಚ್ಚು ಬಹೂಪಯೋಗಿ ಗಜನಿಗಳನ್ನು ಹೊಂದಿದ್ದರೂ ಜನವಸತಿ ಇಲ್ಲ ಎಂಬ ಒಂದೇ ಕಾರಣಕ್ಕೆ ಸರಕಾರದ ಯಾವುದೇ ಸೌಲಭ್ಯಗಳು ಕೈಗೆಟುಕದ ವಿಚಿತ್ರ ಸನ್ನಿವೇಶ ಎದುರಿಸುತ್ತಿದ್ದಾರೆ.

ಕೋಡ್ಕಣಿ ಗ್ರಾಮ ಪಂಚಾಯತದಲ್ಲಿ ಕಪ್ಪೆ ಕೂರ್ವೆ, ಮಾಸೂರುಕೂರ್ವೆ, ಐಗಳಕೂರ್ವೆ ಹಾಗೂ ಬೇಲೆ ಎಂಬ ನಡುಗಡ್ಡೆ ಗ್ರಾಮಗಳಿವೆ. ಈ ಪೈಕಿ ಐಗಳಕೂರ್ವೆ ಹಾಗೂ ಬೇಲೆಯಲ್ಲಿ ಮಾತ್ರ ಜನವಸತಿಯಿದೆ. ಆದರೆ ಜನವಸತಿ ಇಲ್ಲದ ಕಪ್ಪೆ ಕೂರ್ವೆ,
ಮಾಸೂರುಕೂರ್ವೆಯ ಭೂಮಾಲಿಕತ್ವ ಹೊಂದಿದ ಗಜನಿಯ ರೈತರಿಗೆ ತಮ್ಮ ಜಮೀನಿಗೆ ಸಂಬಂಧಿ ಸಿಯಾವುದೇ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಕಪ್ಪೆಕೂರ್ವೆ ಭಾಗದಲ್ಲಿ ಕಪ್ಪೆಕೂರ್ವೆ ಗಜನಿ, ದೊಡ್ಡ ಮೂಳೆ ಗಜನಿ, ಸಣ್ಣಮೂಳೆ ಗಜನಿ, ಯಂಕಣ್ಣ ಗಜನಿಗಳಿವೆ. ಮಾಸೂರು ಕೂರ್ವೆಯಲ್ಲಿ ಮಾಸೂರುಕೂರ್ವೆ, ಕೇಕಿನಕೋಡಿ, ರಂಗನಬೇಲೆ, ಏಳು ಭಾಗ, ಹಾಂಬರಕೋಡಿ, ಮೂಡ್ಲತರ, ಕಲಕಾಟ, ಕೆಳಗಿನಬೈಲ್‌ ಹೀಗೆ ಸುಮಾರು 800 ಎಕರೆಯಷ್ಟು ಗಜನಿ ಕ್ಷೇತ್ರ ಇದೆ.

RELATED ARTICLES  ಗೋಕರ್ಣದಲ್ಲಿ ಶಿವಗಂಗಾ ವಿವಾಹ ಮಹೋತ್ಸವ ಸಂಪನ್ನ

ಸುಮಾರು 400 ರೈತ ಕುಟುಂಬಗಳ ಜ್ವಲಂತ ಸಮಸ್ಯೆ ಏನೆಂದರೆ ತಮ್ಮ ಕುಟುಂಬದ ಹೊಟ್ಟೆ ಹೊರೆಯುವ ಭೂಮಿ ಇಲ್ಲಿದ್ದರೂ ಅವರೆಲ್ಲರ ವಸತಿ ಮಾತ್ರ ಬಾಡ, ಕಾಗಾಲ ಹಾಗೂ ಹೆಗಡೆ ಈ ಮೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ಹೀಗಾಗಿ
ಸರಕಾರದ ಸೌಲಭ್ಯಗಳ ಬಳಕೆಯಲ್ಲಿ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಕೃಷಿ ಭೂಮಿಯಲ್ಲಿ ವ್ಯವಸಾಯಕ್ಕಾಗಿ ಸರ್ಕಾರದ ಸಹಕಾರವನ್ನು ಯಾಚಿಸಿದರೆ ಆ ಅರ್ಜಿಗಳು ತಿರಸ್ಕೃತವಾಗುತ್ತಲೇ ಬಂದಿವೆ. ಕೃಷಿ ಯೋಜನೆಗೆ
ಬೇಕಾದ ದಾಖಲಾತಿಗಳನ್ನು ಸಲ್ಲಿಸುವಾಗ ವಾಸ್ತವ್ಯದ ಮನೆ ನಂಬರ್‌ ಒಂದು ಪಂಚಾಯತಕ್ಕೆ ಸೇರಿದರೆ ಜಮೀನು ಇನ್ನೊಂದು ಪಂಚಾಯತಕ್ಕೆ ಸೇರಿದೆ.

ಹಾಗಿದ್ದರೆ ಜನವಸತಿಯಿಲ್ಲದ ಗ್ರಾಮದಲ್ಲಿ ಮಾಡುವ ಕೃಷಿಗೆ ಸರಕಾರದ ಪ್ರೋತ್ಸಾಹವಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಉಪ್ಪು ನೀರು ನುಗ್ಗುವ ಇಲ್ಲಿ ರೈತರೇ ತಾತ್ಕಾಲಿಕ ಮಣ್ಣಿನ ಬಂಡ್‌ನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ನೀರು ತುಂಬುವುದರಿಂದ ಯಾರೂ ಮನೆ ಕಟ್ಟುವ ಧೈರ್ಯ ಮಾಡುತ್ತಿಲ್ಲ. ತಾತ್ಕಾಲಿಕ ಮನೆಗಾದರೂ ಕೋಡ್ಕಣಿ ಪಂಚಾಯತ್‌ ಪರವಾನಿಗೆ ನೀಡಿದರೆ, ಕೃಷಿಕಾರ್ಯ ಸಂದರ್ಭದಲ್ಲಿ ಉಪಯೋಗವಾಗುತ್ತದೆ ಎಂದು ರೈತರು ಹೇಳುತ್ತಾರೆ.

RELATED ARTICLES  ವಿನಾಯಕ ಬ್ರಹ್ಮೂರು ನಿರ್ದೇಶನದ 6ನೇ ಕಿರುಚಿತ್ರ “ಆಚೆ”ಯ ಚಿತ್ರೀಕರಣ ಪ್ರಾರಂಭ

ಎನ್‌.ಆರ್‌.ಇ.ಜಿ ಮತ್ತಿತರ ವಿವಿಧ ಯೋಜನೆಯ ಸೌಲಭ್ಯ ಪಡೆಯಲು ಕೋಡ್ಕಣಿ ಗ್ರಾಪಂ ವ್ಯಾಪ್ತಿಯಲ್ಲಿನ ರೈತರ ಜಮೀನುಗಳನ್ನು
ಅವರ ವಾಸ್ತವ್ಯವಿರುವ ಕಾಗಾಲ, ಬಾಡ ಹಾಗೂ ಹೆಗಡೆ ಗ್ರಾಪಂ ವ್ಯಾಪ್ತಿಗೆ ಸೇರಿಸುವುದೊಂದೇ ದಾರಿ ಉಳಿದಿದೆ. ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ 1993ರ ಅಧ್ಯಾಯ 3 ರನ್ವಯ ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಇನ್ನೊಂದು ಗ್ರಾಪಂ ವ್ಯಾಪ್ತಿಗೆ ಸೇರಿಸುವ ಹಾಗೂ ಘೋಷಿಸುವ ಅಧಿಕಾರವು ಜಿಲ್ಲಾಧಿಕಾರಿಗಳಿಗೆ ಇರುವುದರಿಂದ ಈ ನಿಟ್ಟಿನಲ್ಲಿ ಕ್ರಮವಾಗಲಿ ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ.