ಕುಮಟಾ: ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಗೋಕರ್ಣದ ಮೊಡರ್ನ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್ ಡಿಜಿಟಲ್ ಲಿಟ್ರಸಿ ಮಿಷನ್ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮವನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆ ಪ್ರತಿಭೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಅಲ್ಲದೇ ಪ್ರತಿಯೊಬ್ಬರ ಆಸಕ್ತಿಗಳು ವಿಭಿನ್ನವಾಗಿರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ಪಡೆಯಲು ಸಾಧ್ಯ. ಪ್ರಸ್ತುತ ಆಧುನಿಕ ಔದ್ಯೋಗಿಕ ಜಗತ್ತಿನಲ್ಲಿ ಕಂಪ್ಯೂಟರ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಹಾಗಾಗಿ ವಿದ್ಯಾರ್ಥಿ ದಿಶೆಯಲ್ಲಿ ಕಂಪ್ಯೂಟರನ ಸಾಮಾನ್ಯಜ್ಞಾನದ ಮಾಹಿತಿ ನೀಡುವ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ನ್ಯಾಷನಲ್ ಡಿಜಿಟಲ್ ಲಿಟ್ರಸಿ ಮಿಷನ್ ಅಡಿಯಲ್ಲಿ 14 ವರ್ಷ ಮೇಲ್ಪಟ್ಟ 800 ವಿದ್ಯಾರ್ಥಿಗಳಿಗೆ ಒಂದು ವಾರದ ತರಬೇತಿ ನೀಡಿ ಆನ್ಲೈನ್ ಪರೀಕ್ಷೆ ನಡೆಸಲಾಗಿತ್ತು. ಈ ಶಾಲೆಯಲ್ಲಿ ಒಟ್ಟೂ 75 ವಿದ್ಯಾರ್ಥಿಗಳು ಭಾಗವಹಿಸಿದ್ದು 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಣ್ಣುಮಕ್ಕಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಸಂತಸ ತಂದಿದೆ. ಗೋಕರ್ಣದಲ್ಲಿ ಪ್ರವಾಸೋದ್ಯಮಕ್ಕೆ ಹೇರಳವಾದ ಅವಕಾಶಗಳಿದ್ದು ಅದನ್ನು ಅಭಿವೃದ್ಧಿಪಡಿಸುವ, ನೀರಿನ ಸಮಸ್ಯೆಗಳನ್ನು ನೀಗಿಸುವ, ಗೋಕರ್ಣದ ಅಭಿವೃದ್ಧಿಯ ನಿಟ್ಟಿನಲ್ಲಿ ಗೋಕರ್ಣ ಪ್ರಾಧಿಕಾರ ನಿರ್ಮಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು ಈ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಶ್ರಮಿಸೋಣ ಎಂದು ಸಹಕರಿಸಿದ ಶಾಲೆಯ ಸಹಕಾರವನ್ನು ಶ್ಲಾಘಿಸಿದರು.

RELATED ARTICLES  16 ವಿದ್ಯಾರ್ಥಿಗಳು 600 ಕ್ಕೆ 600 ಅಂಕ : ಕುಮಟಾ ಸರಸ್ವತಿ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ.

ಲಾಯನ್ಸ್ ಕ್ಲಬ್ ಸದಸ್ಯ ಮಂಜುನಾಥ ಜನ್ನು ಅವರು ಮಾತನಾಡಿ ಮಕ್ಕಳನ್ನು ಒಂದು ಸದೃಢ ಶಕ್ತಿಯನ್ನಾಗಿ ರೂಪಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಾಗರಾಜ ನಾಯಕ ತೊರ್ಕೆಯವರು ನಿವೃತ್ತಿಯ ಬಳಿಕ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಸರಕಾರ ಹುಟ್ಟಿದ ಮಗುವಿನಿಂದ ವೃದ್ಧರವರೆಗೂ ಹಲವು ಯೊಜನೆಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಾರೂ ಕೂಡಾ ಮಾಡುತ್ತಿಲ್ಲ. ಆದರೆ ಓರ್ವ ಖಾಸಗಿ ವ್ಯಕ್ತಿಯಾಗಿ ನಾಗರಾಜ ನಾಯಕ ತೊರ್ಕೆಯವರು ತಮ್ಮ ಟ್ರಸ್ಟ್ ಮೂಲಕ ಈ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅವಿಶ್ರಾಂತರಾಗಿ ಶ್ರಮಿಸುತ್ತಿದ್ದಾರೆ ಎಂದು ಅವರ ಕಾರ್ಯವನ್ನು ಅಭಿನಂದಿಸಿದರು.

RELATED ARTICLES  ಕರ್ನಾಟಕ ರಕ್ಷಣಾ ವೇದಿಕೆ ಉತ್ತರಕನ್ನಡದ ವತಿಯಿಂದ ಕುಮಟಾ ತಾಲೂಕಿನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ

ಮುಖ್ಯ ಅತಿಥಿಗಳಾದ ಜಿ.ಕೆ. ಹೆಗಡೆ, ನಾಗರಾಜ ಹಿತ್ಲಮಕ್ಕಿ, ಮಹೇಶ ಶೆಟ್ಟಿ ಸೇರಿದಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತೋಷ ನಾಯಕ ತೊರ್ಕೆ ಮುಂತಾದವರು ಮಾತನಾಡಿ ನಾಗರಾಜ ನಾಯಕ ತೊರ್ಕೆಯವರ ಹಾಗೂ ಶಾಲೆಯ ಅಭಿವೃದ್ಧಿಯ ಕುರಿತು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನಾಗರಾಜ ನಾಯಕ ತೊರ್ಕೆಯವರು ಎಲ್ಲಾ ಶಿಕ್ಷಕರನ್ನೂ ಅಭಿನಂದಿಸಿ ಎಲ್ಲಾ ಶಿಕ್ಷಕರ ಪರವಾಗಿ ವೃಂದಾ ಗಾಂವಕರ ಅವರನ್ನು, ಶಾಲಾ ಸಮಿತಿಯ ಪರವಾಗಿ ಸಂತೋಷ ನಾಯಕ ತೊರ್ಕೆಯವರನ್ನು ಸನ್ಮಾನಿಸಿ ಗೌರವಿಸಿದರು. ಹಾಗೂ ಎಸ್. ಎಸ್. ಎಲ್. ಸಿ. ಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಚಂದನ, ಚೈತ್ರ, ಅಂಕಿತ, ಅಂಕಿತಾ ನಾಯ್ಕ, ಅದಿತಿ, ಮೇಘಶ್ರೀ, ಆಶ್ಲೇಷ, ಮಾನಸ, ಶ್ರೀನಿಧಿ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಅಲ್ಲದೇ
ನ್ಯಾಷನಲ್ ಡಿಜಿಟಲ್ ಲಿಟ್ರಸಿ ಮಿಷನ್ ಅಡಿಯಲ್ಲಿ ಉತ್ತೀರ್ಣರಾದ 49 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರಾದ ರಾಜೇಶ ಗೋನ್ಸಾಲ್ವಿಸ ಎಲ್ಲರನ್ನೂ ಸ್ವಾಗತಿಸಿದರು. ಅರುಣ ಕವರಿ ಹಾಗೂ ಶೀಲಾ ಮೇಸ್ತ ನಿರೂಪಿಸಿದರು. ಜಮಿಯಾನಾ ಸೈಯ್ಯದ್ ವಂದಿಸಿದರು.