ಶಿರಸಿ : ಸುಗಮ ಸಂಗೀತ ಪರಿಷತ್ ಸುಗಮ ಸಂಗೀತವನ್ನು ಉಳಿಸಿಕೊಂಡು ಹೋಗಲು ಚಳುವಳಿ ರೂಪದಲ್ಲಿ ಕೆಲಸ ಮಾಡಿದೆ. ಪರಿಷತ್ ಆರಂಭವಾದ ನಂತರದಲ್ಲಿ ಸುಗಮ ಸಂಗೀತ ಕಲಾವಿದರಿಗೆ ಪ್ರತ್ಯೇಕವಾದ ಗುರುತು ಸಿಕ್ಕಿದೆ. ಸುಗಮ ಸಂಗೀತ ಕಲಾವಿದರು ಕಡಿಮೆ ಎನ್ನುವ ಭಾವನೆಯನ್ನು ಪರಿಷತ್ ತೊಡೆದು ಹಾಕಿದೆ ಎಂದು ಪಂಡಿತ್ ಹಾಸಣಗಿ ಗಣಪತಿ ಭಟ್ ಹೇಳಿದರು.

ಇಲ್ಲಿನ ವಿಕಾಸ ಆಶ್ರಮ ಸಹ್ಯಾದಿ ಮಂದಿರದಲ್ಲಿ ಶನಿವಾರ ನಡೆದ 15 ನೇ ರಾಜ್ಯ ಮಟ್ಟದ ಸುಗಮ ಸಂಗೀತ ಪರಿಷತ್ ಸಮ್ಮೇಳನವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸುಗಮ ಸಂಗೀತ ಪರಿಷತ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 40 ವರ್ಷಗಳ ಹಿಂದೆ ಯಾವ ಸಂಗೀತದ ಗಾಳಿಯೂ ಇರಲಿಲ್ಲ. ಇವತ್ತು 100ಕ್ಕೂ ಅಧಿಕ ಕಲಾವಿದರು ಇದ್ದಾರೆ. ಸಮಯ, ಸಮೂಹ, ಜನಸಮೂಹದ ನಿರ್ಧಾರದಿಂದ ಕಲೆ ಮತ್ತು ಕಲಾವಿದ ಬೆಳೆಯುತ್ತಾನೆ ಎಂದರು.
ಯಾವುದೇ ಸಂಗೀತವಾದರೂ ಶಾಸ್ರ್ರೀಯ, ಜಾನಪದದ ಆಧಾರದಲ್ಲಿ ಬೆಳೆಯುತ್ತದೆ. ಆದ್ದರಿಂದ ಸುಗಮ ಸಂಗೀತ ಕಲಾವಿದರು ಶಾಸ್ತ್ರೀಯವನ್ನು ಅಭ್ಯಾಸ ಮಾಡಿದಲ್ಲಿ ಉತ್ತಮ ಕಲಾವಿದರಾಗಲು ಸಾಧ್ಯವಾಗುತ್ತದೆ. ಸ್ವರ, ಲಯ ಬಿಟ್ಟು ಯಾವುದೇ ಸಂಗೀತವಿಲ್ಲ. ಶಾಸ್ತ್ರೀಯ ಸಂಗೀತದಲ್ಲಿ ಭಾಷೆ, ಗಡಿ ಮಿತಿಯಿಲ್ಲ. ಆದರೆ ಸುಗಮ ಸಂಗೀತಕ್ಕೆ ಭಾಷೆಯ ಮಿತಿಯಿದೆ. ಇಲ್ಲಿ ಭಾಷೆ ಬಹಳ ಕೆಲಸ ಮಾಡುತ್ತದೆ. ಸುಗಮ ಸಂಗೀತ ಕವಿತೆಯನ್ನು ಬೆಳೆಸುವ, ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತದೆ ಎಂದರು.

RELATED ARTICLES  ರಥ ಸಪ್ತಮಿ ವಿಶೇಷ: ಗೋಕರ್ಣದಲ್ಲಿ ರಥ ಹೊರ ತೆಗೆದು ಪೂಜೆ ಸಲ್ಲಿಕೆ

ಆಶಯ ನುಡಿಗಳನ್ನಾಡಿದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ನಮ್ಮ ಹಿಂದಿನ ಪರಂಪರೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಈ ಸಮ್ಮೇಳನಗಳಿಂದ ಆಗಬೇಕು. ಅದುವೇ ಸಮ್ಮೇಳನದ ಉದ್ದೇಶವಾಗಿದೆ. ಇಂದು ಕುವೆಂಪು, ಬೇಂದ್ರೆ, ಅಡಿಗ, ಶಿಶುನಾಳ ಶರೀಫ ರಂತಹ ಹಿರಿಯ ಕಲಾವಿದರ ಕವಿತೆಗಳು ಜನರ ಮನಸ್ಸಿನಲ್ಲಿ, ಸಾರ್ವಜನಿಕ ವಲಯಗಳಲ್ಲಿ ಮನೆ ಮಾತಾಗಿರಲು ಕಾರಣ ಸುಗಮ ಸಂಗೀತ ಕಲಾವಿದರಾಗಿದ್ದಾರೆ. ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡದಲ್ಲಿ ಕಲಿಯುವವರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿಕೊಂಡು ಹೋಗುತ್ತಿರುವವರು ಸುಗಮ ಸಂಗೀತ ಪರಿಷತ್ ನವರಾಗಿದ್ದಾರೆ. ಶಾಲೆಗಳನ್ನು ತೆರೆದು ಕನ್ನಡ ಕಲಿಯದ ಮಕ್ಕಳಿಗೆ ಸುಗಮ ಸಂಗೀತದ ಮೂಲಕ ಕನ್ನಡವನ್ನು ಕಲಿಸಲಾಗುತ್ತಿದೆ. ಆದ್ದರಿಂದ ಹಿರಿಯ ಕಲಾವಿದರೂ ಸೇರಿ ಎಲ್ಲರೂ ಸುಗಮ ಸಂಗೀತದ ಪ್ರೋತ್ಸಾಹಕ್ಕೆ ಬೆಂಬಲಕ್ಕೆ ನಿಲ್ಲಬೇಕು ಎಂದರು.

RELATED ARTICLES  ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದ ಬಸ್.

ಸಮ್ಮೇಳನದಲ್ಲಿ ಗೀತ ಸಂಗಮ ಪುಸ್ತಕವನ್ನು ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಮಹಾಪೋಷಕ ಉಪೇಂದ್ರ ಪೈ ಹಾಗೂ ಉದ್ಯಮಿ ಶ್ರೀನಿವಾಸ ಹೆಬ್ಬಾರ ಬಿಡುಗಡೆ ಮಾಡಿದರು.ಸುಗಮ ಸಂಗೀತ ಪರಿಷತ್ ವತಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗಳಾದ ಕಾವ್ಯಶ್ರೀ ಪ್ರಶಸ್ತಿಯನ್ನು ಹಿರಿಯ ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಭಾವಶ್ರೀ ಪ್ರಶಸ್ತಿಯನ್ನು ಹಿರಿಯ ಕವಿ ಬಿ.ವಿ.ಶ್ರೀನಿವಾಸ್, ಸುಗಮ ಸಂಗೀತ ಪ್ರಶಸ್ತಿಯನ್ನು ಹಿರಿಯ ತಬಲಾ ವಾದಕ ಡಿ.ದೇವನ್ಬು ಹಾಗೂ ಸುಗಮ ಸಂಗೀತಶ್ರೀ ಪ್ರಶಸ್ತಿಯನ್ನು ಹಿರಿಯ ಧ್ವನಿ ಮುದ್ರಣ ತಜ್ಞ ಅರವಿಂದ ಕಿಗ್ಗಾಲ್ ಅವರುಗಳು ನೀಡಿ ಗೌರವಿಸಲಾಯಿತು.

ಉದ್ಘಾಟನೆ ಮೊದಲು ಒಂದೇ ವೇದಿಕೆಯಲ್ಲಿ ಸಹಸ್ರಕಂಠಗಳಿಂದ ನಾಡಗೀತೆ ಹಾಗೂ ರೈತ ಗೀತೆಗಳನ್ನು ಹಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಶಿರಸಿಯಲ್ಲಿ ಶನಿವಾರ ನಡೆದ ಸುಗಮ ಸಂಗೀತ ಪರಿಷತ್ ರಾಜ್ಯ ಸಮ್ಮೇಳನ ಸಾಕ್ಷಿಯಾಯಿತು. ತಾಲೂಕಿನ 6 ಪ್ರೌಢ ಶಾಲೆಗಳ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಸುಗಮ ಸಂಗೀತ ಪರಿಷತ್ ರಾಜ್ಯ ಸಮ್ಮೇಳನದ ಪ್ರಾರಂಭದಲ್ಲಿ ಉದ್ಘಾಟನಾ ವೇದಿಕೆಯಲ್ಲಿ ಒಂದೇ ಬಾರಿಗೆ ಸಹಸ್ರ ಕಂಠದಲ್ಲಿ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಲಾಯಿತು.