ಕಾರವಾರ: ಕುಟುಂಬದವರು ಅಥವಾ ಆತ್ಮೀಯರು ಮೃತಪಟ್ಟಾಗ ಕೆಲವರು ಅವರ ನೆನಪು ಸದಾ ಇರಲೆಂದು ಅವರಿಗಾಗಿ ಪುತ್ಥಳಿ ನಿರ್ಮಿಸುತ್ತಾರೆ. ಇನ್ನು ಕೆಲವರು ಸಮಾಧಿ ನಿರ್ಮಿಸಿ, ಕಲ್ಲುಗಳ ಮೇಲೆ ಅವರ ಹೆಸರನ್ನು ಕೆತ್ತಿಸಿಡುತ್ತಾರೆ. ಆದರೆ ಇಲ್ಲಿನ ಅರಣ್ಯ ಇಲಾಖೆ ನಿರ್ಮಿಸುತ್ತಿರುವ ಸಸ್ಯೋದ್ಯಾನದಲ್ಲಿ ಮೃತರ ನೆನಪಿಗಾಗಿ ಗಿಡಗಳನ್ನು ನೆಡಲು ಅವಕಾಶ ನೀಡುವ ಮೂಲಕ ವೈಶಿಷ್ಟ್ಯ ಮೆರೆಯುತ್ತಿದೆ.

ಕೋಡಿಬಾಗದ ಸಾಗರ ದರ್ಶನ ಸಮು ದಾಯ ಭವನದಿಂದ ಕಾಳಿ ನದಿ ಸಮುದ್ರ ಸೇರುವ ಸಂಗಮ ಸ್ಥಳದವರೆಗಿನ 16 ಹೆಕ್ಟೇರ್‌ ಪ್ರದೇಶದಲ್ಲಿ ಇಲಾಖೆ ನಿರ್ಮಾಣ ಮಾಡುತ್ತಿರುವ ಸಾಲುಮರದ ತಿಮ್ಮಕ್ಕ ವೃಕ್ಷ ವನದಲ್ಲಿಯೇ ಒಂದಿಷ್ಟು ಜಾಗವನ್ನು ಸ್ಮೃತಿ ವನಕ್ಕೆ ಮೀಸಲಿಡಲಾಗುತ್ತಿದೆ. ಗಿಡವನ್ನೂ ಸಹ ಇಲಾಖೆ ಪೂರೈಸಲಿದೆ. ಬಳಿಕ ಇಲಾಖೆಯೇ ಅದರ ಸಂರಕ್ಷಣೆ ಕಾರ್ಯ ಮಾಡಲಿದೆ.

RELATED ARTICLES  ಶಾಲಾ ಕೊಠಡಿ ಮೇಲ್ಚಾವಣಿ ದುರಸ್ತಿಗೆ ಅನುದಾನ ಕೊಡಿಸಿದ ನಿವೇದಿತ ಆಳ್ವಾ.

ಮೃತ ಪ್ರೀತಿಪಾತ್ರರ ನೆನಪು ಶಾಶ್ವತವಾಗಿರಿಸಲು ಹಾಗೂ ಆ ಮೂಲಕ ವೃಕ್ಷಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ‘ಸ್ಮೃತಿ ವನ’ ಎಂಬ ಹೆಸರಿನಲ್ಲಿ ಅರಣ್ಯ ಇಲಾಖೆಯಿಂದ ಈ ಯೋಜನೆ ಸಿದ್ಧಪಡಿಸಲಾಗಿದೆ. ಈಗಾಗಲೇ ಇಲ್ಲಿನ ಕಾಳಿ ಸಂಗಮ ಪ್ರದೇಶದಲ್ಲಿ ಸ್ಥಳೀಯರು ಅನಾದಿ ಕಾಲದಿಂದಲೂ ಪಿತೃ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲಿ ಕಾರ್ಯಗಳನ್ನು ಕೈಗೊಂಡ ಬಳಿಕ ಇಲ್ಲಿಗೆ ಬಂದು ಅವರ ನೆನಪಿನಲ್ಲಿ ಗಿಡವನ್ನು ನೆಡಬಹುದಾಗಿದೆ.

ಸಾಲುಮರದ ತಿಮ್ಮಕ್ಕ ವೃಕ್ಷ ವನದ ಕಾಮಗಾರಿ ಶೇ 50ರಷ್ಟು ಪೂರ್ಣಗೊಂಡಿದೆ. ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಈ ಉದ್ಯಾನ ₹ 1 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿದೆ. ಇದರ ನಿರ್ಮಾಣದ ಗುತ್ತಿಗೆ ಯನ್ನು ಬೆಂಗಳೂರಿನ ಇಕೋ ಹೋಮ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆಯು ಪಡೆದಿದೆ. ಸ್ಮೃತಿ ವನ ನಿರ್ವಹಣೆಗೆ ₹1 ಲಕ್ಷ ಮೀಸಲಿದಡಲಾಗಿದೆ.

RELATED ARTICLES  ಇಹಲೋಕ ತ್ಯಜಿಸಿದ ಡಾ. ಎಂ.ಪಿ ಕರ್ಕಿ : ಗಣ್ಯರ ಸಂತಾಪ

‘ಉದ್ಯಾನದಲ್ಲಿ ಸುರಗಿ, ಹೊನ್ನೆ, ಹೊಳೆಮತ್ತಿ, ಹೊಳೆ ದಾಸವಾಳ, ಹಲಸು, ಮಾವು, ಮುರಗಲ್‌ ಸೇರಿದಂತೆ ಹಲವಾರು ಜಾತಿಯ ಗಿಡಗಳು ಹಾಗೂ ಪ್ರಮುಖವಾಗಿ ಔಷಧಯುಕ್ತ ಗಿಡಗಳನ್ನು ಇಲ್ಲಿ ನೆಟ್ಟು ಬೆಳೆಸಲಾಗುವುದು. ಅಲ್ಲದೇ ಇದಲ್ಲಿ 2 ಕಿ.ಮೀ. ಉದ್ದದ ಜಾಗಿಂಗ್‌ ಪಥವನ್ನು ನಿರ್ಮಾಣ ಮಾಡಲಾಗುತ್ತಿದೆ. 200 ಮಂದಿ ಒಟ್ಟಿಗೆ ಯೋಗಾಸನ ಮಾಡುವಂಥ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ.

ಇನ್ನು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಗುಡಿಸಲಿನ ಮಾದರಿಯ ಶೆಲ್ಟರ್‌ಗಳನ್ನು ನಿರ್ಮಿಸಲಾಗುವುದು. ಅಲ್ಲದೇ ಇಲ್ಲಿ ಫುಡ್‌ ಕೋರ್ಟ್‌ ಸಹ ಬರಲಿದೆ. ಉದ್ಯಾನ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಹೆಚ್ಚು ಗಾಳಿ ಮರಗಳಿದ್ದು, ಜೋಕಾಲಿ, ರೋಪ್‌ ವೇ ಇನ್ನಿತರ ಆಟಿಕೆಗಳನ್ನು ಹಾಕಲಾಗುತ್ತಿದೆ.