ಕುಮಟಾ ; ವಿಪ್ರ ಒಕ್ಕೂಟ(ರಿ) ಹೆಗಡೆಯ ವತಿಯಿಂದ ಇಂದು ಬೆಳಿಗ್ಗೆ ಕುಮಟಾ ತಾಲೂಕು ಹೆಗಡೆ ಗ್ರಾಮದ ಮೂಡಲ ದಿಕ್ಕಿನಲ್ಲಿರುವ ಶ್ರೀ ಗೋಪಾಲಕೃಷ್ಣನ ದೇವಸ್ಥಾನದಲ್ಲಿ ಧನುರ್ಮಾಸದ ನಿಮಿತ್ತ ಪ್ರತ್ಯೂಷ ಪೂಜೆಯು ನೆರವೇರಿತು. ಧನು ಮಾಸದ ಒಂದು ತಿಂಗಳ ಪೂರ್ತಿ ಸೂರ್ಯೋದಯಕ್ಕಿಂತ ಮೊದಲು ಭಗವಂತನನ್ನು ಪೂಜೆ ಮಾಡಬೇಕು ಎಂದು ವೈಖಾನಸ ಆಗಮ ಆದೇಶಿಸುತ್ತದೆ.
ಧನು ಮಾಸದಲ್ಲಿ ಒಂದು ದಿನ ಈ ರೀತಿಯ ಪೂಜೆಯನ್ನು ಈ ಸಂಘಟನೆಯು ಕಳೆದ 3 ವರ್ಷಗಳಿಂದ ನಡೆಸಿಕೊಂಡು ಬರುತ್ತಾ ಇದೆ. ಬೆಳಿಗ್ಗೆ 5 ಘಂಟೆಯಿಂದಲೇ ಭಗವಂತನಾದ ಶ್ರೀ ಕೃಷ್ಣನಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಪ್ರಾರಂಭವಾಯಿತು. ವೈದಿಕರು ಪುರುಷಸೂಕ್ತವನ್ನು ಪಠಿಸುತ್ತಾ ಇದ್ದರು ಮಾತೃ ವಿಭಾಗದವರಿಂದ ವಿಷ್ಣುಸಹಸ್ರನಾಮ, ಶಿವ ಪಂಚಾಕ್ಷರಿ ಮಂತ್ರ , ಭಗವದ್ಗೀತೆಯ ಹದಿನೈದನೇ ಅಧ್ಯಾಯ ಪಠಣ ನಡೆಯಿತು.
ಬೆಳಿಗ್ಗೆ 6-30 ಕ್ಕೆ ಗೋಪೂಜೆ ನಡೆಯಿತು. ಭಕ್ತಾದಿಗಳು ಗೋಗ್ರಾಸವನ್ನು ನೀಡಿ ಧನ್ಯತಾ ಭಾವವನ್ನು ಅನುಭವಿಸಿದರು. 6-45 ಕ್ಕೆ ಶ್ರೀ ಕೃಷ್ಣನಿಗೆ ಮಹಾ ಮಂಗಳಾರತಿ ನಡೆಯಿತು. ಈ ಬೆಳಗ್ಗಿನ ಝಾವದಲ್ಲಿ 75 ಕ್ಕೂ ಹೆಚ್ಚು ಭಕ್ತರು ಪುಣ್ಯಕಾರ್ಯದಲ್ಲಿ ಭಾಗಿಯಾಗಿ ಶ್ರೀ ಕೃಷ್ಣನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.