ಕಾರವಾರ:‘ಸಂವಿಧಾನ ಬದಲಾಯಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಹಾಗೂ ಮಹಾರಾಷ್ಟ್ರದ ಕೊರೆಗಾಂವ್‌ನಲ್ಲಿ ಇತ್ತೀಚಿಗೆ ದಲಿತರ ಮೇಲೆ ನಡೆದ ಹಿಂಸಾಚಾರವನ್ನು ವಿರೋಧಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಭಾನುವಾರ ರಸ್ತೆ ತಡೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಕೊರೆಗಾಂವ್ ವಿಜಯಸ್ತಂಭದ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭೀಮಾ ಕೊರೆಗಾಂವ್ ಶೌರ್ಯ ದಿನ ಆಚರಿಸಿದ ಕಾರ್ಯಕರ್ತರು, ಸುಭಾಷ್ ವೃತ್ತದವರೆಗೆ ಸಚಿವ ಅತಂತಕುಮಾರ್ ಹೆಗಡೆ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ರ್‌್ಯಾಲಿ ನಡೆಸಿದರು. ಬಳಿಕ ಅಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
‘ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಿದೆ. ದೇಶದ ಏಕತೆ, ಸಮಗ್ರತೆ, ಜಾತ್ಯಾತೀತತೆ, ಸಮಾನತೆ ಸಂವಿಧಾನದ ಮೂಲ ಮಂತ್ರಗಳಾಗಿವೆ. ಪ್ರತಿಯೊಬ್ಬರೂ ಕೂಡ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬದ್ಧರಾಗಬೇಕಿದೆ. ಆದರೆ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಸಂವಿಧಾನದ ಮೂಲ ಕಲ್ಪನೆಯಾದ ಜ್ಯಾತ್ಯಾತೀತತೆಯ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿರುವುದಲ್ಲದೇ, ಭಾರತದಲ್ಲಿ ಜ್ಯಾತ್ಯಾತೀತರು ಎನ್ನುವವರ ರಕ್ತದ ಬಗ್ಗೆ ಸಂದೇಹವಿದೆ ಎಂದಿರುವ ಸಚಿವ ಅನಂತಕುಮಾರ್ ಹೆಗಡೆಯವರ ಹೇಳಿಕೆ ನಮಗೆಲ್ಲರಿಗೂ ಮರ್ಯಾದೆಗೇಡಿನ ವಿಷಯವಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದೀಪಕ್ ಕುಡಾಳಕರ್ ಕಿಡಿಕಾರಿದರು.
ದಲಿತ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ, ‘ಕೇಂದ್ರ ಸಚಿವರು ರಕ್ತ ಪರಿಶುದ್ಧತೆ ಕುರಿತು ಮಾತನಾಡುವ ಮೂಲಕ ಸಮಾಜ ವಿರೋಧಿ ಹೇಳಿಕೆ ನೀಡಿರುವುದು ದೇಶ ದ್ರೋಹದ ಕೃತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಿ, ಅವರನ್ನು ಕೇಂದ್ರದ ಸಚಿವ ಸ್ಥಾನದಿಂದ ಶೀಘ್ರವೇ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಸಚಿವರಾಗಿರುವ ಅವರು ಇತ್ತೀಚಿಗೆ ಪದೇ ಪದೇ ಅದನ್ನು ಅಗೌರವಿಸುವ ಮಾತುಗಳನ್ನಾಡುತ್ತಿದ್ದಾರೆ. ಅವರ ಹೇಳಿಕೆಗಳಿಂದಾಗಿ ಎಲ್ಲೆಡೆ ಅಶಾಂತಿ ಸೃಷ್ಟಿಯಾಗುತ್ತಿದೆ. ಅವರು ಮೊದಲು ತಮ್ಮ ರಕ್ತದ ಗುರುತು ಪರಿಚಯಿಸಿಕೊಳ್ಳಲಿ’ ಎಂದಿರುವ ಅವರು, ‘ಮತ್ತೆ ಇದೇ ರೀತಿ ಮುಂದುವರಿಸಿದರೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತೇವೆ. ಜತೆಗೆ ಮುಂದಿನ ಚುನಾವಣೆಯಲ್ಲಿ ನಿಮಗೆ ನಮ್ಮ ರಕ್ತದ ಗುರುತನ್ನು ಪರಿಚಯಿಸುತ್ತೇವೆ’ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಶ್ಯಾಮಸುಂದರ್ ಗೋಕರ್ಣ, ದುಂಡಪ್ಪ ಬಂಡಿವಡ್ಡರ್, ನರೇಶ್, ಸಚಿನ್ ಬೋರ್ಕರ್, ಘಾರು ಮಾಂಗ್ರೆ ಹಾಜರಿದ್ದರು.